ಡಾಲಿ ಸಿನಿಮಾ ನಿಂತೋಯ್ತಾ? ಹೀಗೊಂದು ಪ್ರಶ್ನಾರ್ಥಕ ಸುದ್ದಿನಾ ನಿಮ್ಮುಂದಿಟ್ಟಾಗ ಕುತೂಹಲ ಕೆರಳುತ್ತೆ. ಯಾವ್ ಸಿನಿಮಾ? ಏನ್ ಕಥೆ? ಸ್ಟಾಪ್ ಆಗುವಂತಹದ್ದು ಏನಾಯ್ತು? ಡೈರೆಕ್ಟರ್ ಯಾರು? ಪ್ರೊಡ್ಯೂಸರ್ ಯಾರು? ಅಡ್ಡಗಾಲು ಹಾಕಿದವರು ಯಾರು? ಹೀಗೆ ಒಂದಿಷ್ಟು ಪ್ರಶ್ನೆಗಳು ಸಹಜವಾಗಿ ಕಾಡೋದಕ್ಕೆ ಶುರುವಾಗುತ್ತೆ. ಅದೆಲ್ಲದಕ್ಕೂ ಉತ್ತರ ಕೊಡುವ ವರದಿ ಇಲ್ಲಿದೆ ನೋಡಿ
ಡಾಲಿ ಧನಂಜಯ್ ಈಗ ಗೆಲ್ಲೋ ಕುದುರೆ. ಯಾವುದೇ ಟ್ರ್ಯಾಕ್ ಇರಲಿ, ಎದುರಾಳಿ ಎಷ್ಟೇ ಬಲಿಷ್ಟವಾಗಿರಲಿ ಅಲ್ಲಿ ಗೆಲ್ಲೋದು ಜಾಲಿರೆಡ್ಡಿನೇ. ಹೀಗಾಗಿ, ಸಿನಿಮಾಮಂದಿ ಡಾಲಿ ಹಿಂದೆ ಬಿದ್ದಿದ್ದಾರೆ. ಒಂದ್ಕಾಲಕ್ಕೆ ಡಾಲಿನಾ ಐರನ್ ಲೆಗ್ಗು, ಅವನ ಜೊತೆ ಸಿನಿಮಾ ಮಾಡಿದರೆ ಅಟ್ಟರ್ ಫ್ಲಾಪ್ ಅಂತೆಲ್ಲಾ ಅಡ್ಡಾದಿಡ್ಡಿ ಮಾತನಾಡಿದವರು ಇವತ್ತು ಅದೇ ಡಾಲಿನ ಗೋಲ್ಡನ್ ಲೆಗ್ ಅಂತ ಕೊಂಡಾಡ್ತಿದ್ದಾರೆ. ಧನಂಜಯ್ ಕಾಲ್‍ಶೀಟ್‍ಗಾಗಿ ಕ್ಯೂ ನಿಂತ್ಕೊಂಡು ಕಾಯ್ತಿದ್ದಾರೆ.
ಅಂದ್ಹಾಗೇ, ಸಿನಿದುನಿಯಾದಲ್ಲಿ ಡಾಲಿ ಧನಂಜಯ್‍ಗೆ ಇಷ್ಟೊಂದು ಡಿಮ್ಯಾಂಡ್ ಕ್ರಿಯೇಟ್ ಆಗಲಿಕ್ಕೆ ಕಾರಣ ಟಗರು ಸಿನಿಮಾ ಅನ್ನೋದು ನಿಮಗೆಲ್ಲ ಗೊತ್ತೆಯಿದೆ. ಸುಕ್ಕಾ ಸೂರಿ ಸೃಷ್ಟಿ ಮಾಡಿದ ಡಾಲಿ ಅನ್ನೋ ಒಂದು ಕ್ಯಾರೆಕ್ಟರ್ ಧನಂಜಯ್ ವೃತ್ತಿ ಬದುಕನ್ನೇ ಬದಲಾಯಿಸಿಬಿಡ್ತು. ಚಿತ್ರರಂಗಕ್ಕೆ ಬಂದು ಹತ್ತಾರು ಸಿನಿಮಾ ಮಾಡಿದರೂ ಸಿಗದ ನೇಮು, ಫೇಮು, ಒಂದೇ ಸಿನಿಮಾಗೆ, ಒಂದೇ ಪಾತ್ರಕ್ಕೆ ದಕ್ಕಿಬಿಡ್ತು. ಗೆಲುವೆಂಬ ಕುದುರೆ ಅರಸೀಕೆರೆ ಅರಸನ ಮನೆ ಮುಂದೆ ಬಂದು ಝಾಂಡಾ ಹೂಡ್ತು. ಸ್ಯಾಂಡಲ್‍ವುಡ್ ಮಾತ್ರವಲ್ಲ ಪಕ್ಕದ ಇಂಡಸ್ಟ್ರಿಯನ್ನೂ ರೂಲ್ ಮಾಡು ಬಾ ಅಂತ, ಆ ಅಶ್ವಮೇಧ ಕುದುರೆ ಡಾಲಿನ ಸವಾರಿ ಕರ್ಕೊಂಡು ಹೋಯ್ತು. ಅಷ್ಟಕ್ಕೂ, ಹೀಗ್ಯಾಕೆ ಡಾಲಿ ಬಗ್ಗೆ ಇಷ್ಟೆಲ್ಲಾ ಬರೆಯುತ್ತಿದ್ದೇವೆ ಅಂದರೆ ಅದಕ್ಕೆ ಕಾರಣ `ಡಾಲಿ’ ಹೆಸರಿನ ಸಿನಿಮಾ
ಟಗರು ಸಿನಿಮಾದ ನಂತರ ಧನಂಜಯ್ ಖದರ್ರು ಮತ್ತು ಕ್ರೇಜ್‍ನ ನೋಡಿ ಅನೇಕ ನಿರ್ದೇಶಕರು ಮತ್ತು ನಿರ್ಮಾಪಕರು ಡಾಲಿ ಹಿಂದೆ ಬಿದ್ದರು. ಆ ಪೈಕಿ ಪ್ರಭು ಶ್ರೀನಿವಾಸ್ ಕೂಡ ಒಬ್ಬರು. ಪಾರಿಜಾತ, ಗಣಪ, ಕರಿಯ 2 ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರೋ ಪ್ರಭು ಶ್ರೀನಿವಾಸ್, ಧನಂಜಯ್ ಕಾಲ್‍ಶೀಟ್ ಪಡೆದು ಡಾಲಿ ಹೆಸರಲ್ಲೇ ಸಿನಿಮಾ ಮಾಡೋದಕ್ಕೆ ಮುಂದಾಗ್ತಾರೆ. ಟೈಟಲ್ ಲಾಂಚ್ ಮಾಡಿ, ಪೋಸ್ಟರ್ ರಿಲೀಸ್ ಕೂಡ ಮಾಡ್ತಾರೆ. ಸುದ್ದಿಗೋಷ್ಟಿಯಲ್ಲಿ ಭಾಗಿಯಾಗಿ ಸ್ವತಃ ಧನಂಜಯ್ ಕೂಡ ಈ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅನಂತ್ರ ಈ ಚಿತ್ರ ಏನಾಯ್ತು? ಎಲ್ಲಿಗೆ ಬಂತು? ಏನ್ ನಡೀತಿದೆ? ಇದ್ಯಾವ ಪ್ರಶ್ನೆಗೂ ಉತ್ತರ ಇಲ್ಲ. ಆದರೆ, ಗಾಂಧಿನಗರದಲ್ಲಿ ಈ ಚಿತ್ರದ ಬಗ್ಗೆ ಬೇರೆನೇ ಸುದ್ದಿ ಓಡಾಡ್ತಿದೆ.
ಡಾಲಿ ಸಿನಿಮಾ ಸೆಟ್ಟೇರಿದ್ದು ನಿಜ, ಸುದ್ದಿಗೋಷ್ಟಿ ಮಾಡಿದ್ದು ನಿಜ, ಶೂಟಿಂಗ್ ಹೋಗಿದ್ದು ನಿಜ. ಆದರೆ, ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ವೈಮನಸ್ಸು, ಭಿನ್ನಾಭಿಪ್ರಾಯ ಮೂಡಿದ್ದು, ಹಣಕಾಸಿನ ವಿಚಾರವಾಗಿ ಸಿನಿಮಾ ಸ್ಟಾಪ್ ಆಗಿದೆ ಅನ್ನೋ ಸುದ್ದಿ ಕೇಳಿಬರ್ತಿದೆ. ಉತ್ತರ ಪ್ರದೇಶಕ್ಕೆ ಶೂಟಿಂಗ್ ಹೋದಂತಹ ಸಂದರ್ಭದಲ್ಲಿ ಈ ರೀತಿಯ ವಾತಾವರಣ ಕ್ರಿಯೇಟ್ ಆಗಿತ್ತಂತೆ. ಆಗ ಡಾಲಿ ಕೈನಲ್ಲಿ ದುಡ್ಡಿಲ್ಲದ ಕಾರಣಕ್ಕೆ ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಬೆಂಗಳೂರಿಗೆ ಬಂದಿಳಿದರು ಎಂಬ ಸುದ್ದಿ ಗಾಸಿಪ್ ಕಾಲೋನಿಯಲ್ಲಿ ಜೋರಾಗಿ ಸದ್ದುಮಾಡ್ತಿದೆ.
ಅಷ್ಟಕ್ಕೂ, ಈ ಸುದ್ದಿ ನಿಜಾನಾ? ಈ ಗಲ್ಲಿ ಗಾಸಿಪ್‍ನಲ್ಲಿ ಎಷ್ಟು ಹುರುಳಿದೆ ಅನ್ನೋದು ನಮಗೂ ತಿಳಿತಾಯಿಲ್ಲ. ಆದರೆ, ಟಗರು ಸಿನಿಮಾ ನಂತರ ಡಾಲಿ ಹೆಚ್ಚುಕಮ್ಮಿ ಹದಿನೈದರಿಂದ ಹದಿನಾರು ಸಿನಿಮಾ ಮಾಡಿದ್ದಾರೆ. ಸ್ಪೆಷಲ್ ಅಪಿಯರೆನ್ಸ್ ಸೇರಿದಂತೆ ಸೋಲೋ ಹೀರೋ ಆಗಿಯೂ ಸೈ ಎನಿಸಿಕೊಂಡಿದ್ದಾರೆ. ನಿರ್ಮಾಪಕನಾಗಿಯೂ ಗುರ್ತಿಸಿಕೊಂಡಿದ್ದಾರೆ. ಹೀಗಿರುವಾಗ ಡಾಲಿ ಚಿತ್ರ ಏನಾಯ್ತು? ಏನು ಸಮಸ್ಯೆ ಇಲ್ಲ ಅಂದಿದ್ದರೆ ಪಾಪ್‍ಕಾರ್ನ್ ಮಂಕಿ ಟೈಗರ್ ಬೆನ್ನಲ್ಲೇ ಈ ಚಿತ್ರವೂ ತೆರೆಗೆ ಬರಬೇಕಿತ್ತು. ಆದರೆ, ಇದುವರೆಗೂ ಈ ಸಿನಿಮಾದ ಬಗ್ಗೆ ಅಪ್‍ಡೇಟ್ ಇಲ್ಲ. ಇದಕ್ಕೆ ನಿರ್ದೇಶಕರಾದ ಪ್ರಭು ಶ್ರೀನಿವಾಸ್, ನಿರ್ಮಾಪಕರಾದ ಯೋಗೇಶ್ ನಾರಾಯಣ್ ಏನ್ ಹೇಳ್ತಾರೋ ಗೊತ್ತಿಲ್ಲ. ಆದರೆ ಡಾಲಿಯಂತೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಉತ್ತರಕಾಂಡ, ಪುಷ್ಪ ಪಾರ್ಟ್2 ಸೇರಿದಂತೆ ಒಂದಿಷ್ಟು ಪರಭಾಷಾ ಸಿನಿಮಾಗಳಲ್ಲೂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.