ದುಷ್ಮನ್ ಕಿದರ್ ಹೈ ಅಂದರೆ ಬಗಲ್ ಮೇ ಹೈ ಅನ್ನೋ ಹಾಗೇ ಈ ಉಂಡೇನಾಮ ಹಾಕೋರು ಕೂಡ ಬಾಜುಕೇ ಇರ್ತಾರ. ಹಿಂಗಾಗಿ ಬಾಳ್ ಹುಷಾರ್ ಇರಬೇಕು. ಅಪ್‍ಕೋರ್ಸ್ ಮಂದಿ ಹುಷಾರ್ ಆಗೇ ಇದ್ದಾರ. ಎಷ್ಟರ ಮಟ್ಟಿಗೆ ಅಂದರೆ ಉಂಡೇನಾಮ ಅಂತ ಟೈಟಲ್ ಇಟ್ಟಿರೋ ಕಾರಣಕ್ಕೆ ಥಿಯೇಟರ್ ಕಡೆ ತಲೆಹಾಕಿ ಕೂಡ ನೋಡದೇ ಇರುವಷ್ಟು. ಪಾಪ ಆ ಪ್ರೊಡ್ಯೂಸರ್ ಬೊಂಬ್ಡೆ ಹೊಡ್ಕೊಳ್ಳಿಕ್ಕಾತ್ತಾನ? ಮಂದಿಗೆ ಮೃಷ್ಟಾನ್ನ ಭೋಜನ ಹಾಕ್ಸೋಣ ಅಂತ ತೀರ್ಮಾನ ಮಾಡಿ ಈ ಸಿನಿಮಾ ಮಾಡಿದೆ. ಆದರೆ, ಮಂದಿ ಏನ್ಪಾ ಹಿಂಗ್ ಕೈಕೊಟ್ಟು ಬಿಟ್ರು ಅಂತ ಕಂಗಾಲಾಗಿದ್ದಾನ. ಅಷ್ಟಕ್ಕೂ, ಜನ ಯಾಕೇ ಉಂಡೇನಾಮದ ಕಡೆ ಒಲವು ತೋರಲಿಲ್ಲ? ಸದ್ಯ ಉಂಡೇನಾಮದ ಪರಿಸ್ಥಿತಿ ಏನಾಗಿದೆ? ಆ ಕುರಿತಾದ ಡೀಟೈಲ್ಸ್ ಇಲ್ಲಿದೆ ಓದಿ
ಉಂಡೇನಾಮ ಟೈಟಲ್ ಕೇಳಿದ ತಕ್ಷಣ ಸಹಜವಾಗಿ ನಗು ಬರುತ್ತೆ. ಆದರೆ, ಈ ಟೈಟಲ್ ಇಟ್ಟು ಸಿನಿಮಾ ಮಾಡಿದ ನಿರ್ಮಾಪಕರ ಪರಿಸ್ಥಿತಿ ಈಗ ನಗೋ ಹಂಗಿಲ್ಲ ಬಿಡಿ. ಅಷ್ಟಕ್ಕೂ ಆ ನಿರ್ಮಾಪಕರು ಬೇರಾರು ಅಲ್ಲ ಅಯೋಗ್ಯ, ಚಮಕ್, ಶೋಕಿವಾಲ, ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಸೇರಿದಂತೆ ಒಂದಿಷ್ಟು ಹಿಟ್ ಸಿನಿಮಾಗಳನ್ನ ಕೊಟ್ಟಿರುವಂತವರು. ಅವರ ಹೆಸರು ಟಿ. ಆರ್ ಚಂದ್ರಶೇಖರ್. ಸ್ಯಾಂಡಲ್‍ವುಡ್‍ನ ತುಂಬಾ ಪ್ಯಾಷನೇಟ್ ಪ್ರೊಡ್ಯೂಸರ್ ಇವರು. ಕನ್ನಡ ಚಿತ್ರರಂಗಕ್ಕೆ ಒಳ್ಳೊಳ್ಳೆ ಚಿತ್ರಗಳನ್ನ ಕೊಡುಗೆಯಾಗಿ ಕೊಡಬೇಕು ಎಂಬ ನಿಟ್ಟಿನಲ್ಲಿ ಗಂಧದಗುಡಿಗೆ ಬಲಗಾಲಿಟ್ಟು ಬಂದಿರುವ ಈ ಅನ್ನದಾತ, ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಎಂಬ ನಿರ್ಮಾಣ ಸಂಸ್ಥೆಯನ್ನ ಹುಟ್ಟುಹಾಕಿ ಸದಭಿರುಚಿಯ ಸಿನಿಮಾಗಳನ್ನು ಮಾಡಿಕೊಂಡು ಹೋಗ್ತಿದ್ದಾರೆ. ಕಳೆದ ಎರಡು ವಾರದ ಹಿಂದೆ ಇವರ ನಿರ್ಮಾಣದ ಉಂಡೇನಾಮ ಎಂಬ ಚಿತ್ರ ರಿಲೀಸ್ ಆಗಿತ್ತು. ಕೆ.ಎಲ್ ರಾಜಶೇಖರ್ ಅನ್ನೋರು ಡೈರೆಕ್ಟರ್ ಮಾಡಿದ್ದರು. ಆದರೆ, ಒಂದೇ ವಾರಕ್ಕೆ ಥಿಯೇಟರ್ ನಿಂದ ಎತ್ತಂಗಡಿ ಆಗಿದೆ
ಉಂಡೇನಾಮ.. ಸ್ಯಾಂಡಲ್‍ವುಡ್ ಅಂಗಳದಲ್ಲಿ ಟೈಟಲ್‍ನಿಂದ ಸೌಂಡ್ ಮಾಡಿದಂತಹ ಸಿನಿಮಾ. ಅದರಲ್ಲೂ ಕಾಮಿಡಿ ಕಿಂಗ್ ಕೋಮಲ್ ಕಂಬ್ಯಾಕ್ ಸಿನಿಮಾ ಎನ್ನುವ ಕಾರಣಕ್ಕೆ ಈ ಚಿತ್ರದ ಮೇಲೆ ಒಂದಿಷ್ಟು ನಿರೀಕ್ಷೆಯಿತ್ತು. ಸುಮಾರು ವರ್ಷಗಳಾದ್ಮೇಲೆ ಕೋಮಲ್‍ನ ಬಿಗ್‍ಸ್ಕ್ರೀನ್ ಮೇಲೆ ನೋಡೋದಕ್ಕೆ ಪ್ರೇಕ್ಷಕರು ಕೂಡ ಕುತೂಹಲದಿಂದ ಕಾದಿದ್ದರು. ಫಸ್ಟ್ ಡೇ ಫಸ್ಟ್ ಶೋ ನೋಡಲಿಕ್ಕೆ ಥಿಯೇಟರ್‍ಗೂ ಬಂದರು. ಆದರೆ, ಕೋಮಲ್ ಕಾಮಿಡಿ ಕೊಟ್ಟಷ್ಟು ಕಿಕ್ಕು, ಉಂಡೇನಾಮದ ಕಂಟೆಂಟ್ ಕೊಟ್ಟಿಲ್ಲ. ಕರೋನಾ ಕಾಲದ ಕಾಲ್‍ಗರ್ಲ್ ಹಾಗೂ ಫಸ್ಟ್ ನೈಟ್ ಕಥೆ ಕೈಹಿಡಿದಿಲ್ಲ ಎಂಬುದಕ್ಕೆ ವಾರದೊಳಗೆ ಚಿತ್ರಮಂದಿರದಿಂದ ಕಿಕ್ ಔಟ್ ಆಗಿರುವುದೇ ಸಾಕ್ಷಿ.
ಎಷ್ಟೇ ದೊಡ್ಡ ಸೂಪರ್‌ಸ್ಟಾರ್ ಇದ್ದರೂ ಕೂಡ ಕಂಟೆಂಟ್ ಈಸ್ ಕಿಂಗ್ ಅನ್ನೋದು ಸಾಬೀತಾಗಿದೆ. ಒಳ್ಳೆ ಕಂಟೆಂಟ್ ಇದ್ದರೆ ಆ ಸಿನಿಮಾ ಬರೀ ಹೊಸಬರಿಂದ ಕೂಡಿದ್ದರೂ ಕೂಡ ಕಲಾಭಿಮಾನಿಗಳು ಜೈಕಾರ ಹಾಕಿ ಊರ್ತುಂಬಾ ಮೆರವಣಿಗೆ ಮಾಡ್ತಿದ್ದಾರೆ. ಹೀಗಿರುವಾಗ ನಿರ್ದೇಶಕರು, ನಿರ್ಮಾಪಕರು, ನಟರು ಎಲ್ಲರೂ ಕೂಡ ಗಟ್ಟಿಕಥೆ ಕಡೆ ಗಮನಕೊಟ್ಟು ಸಿನಿಮಾ ಮಾಡ್ಬೇಕಾಗುತ್ತೆ. ಬರೀ ಸಿನಿಮಾ ಮಾಡೋದು ಮಾತ್ರವಲ್ಲ ಅದನ್ನ ಜನರಿಗೆ ರೈಟ್ ಟೈಮ್‍ಗೆ ತಲುಪಿಸಬೇಕಾಗುತ್ತೆ. ಸದ್ಯ ಎಲ್ಲರೂ ಚುನಾವಣೆ ಕಣದಲ್ಲಿದ್ದಾರೆ, ಐಪಿಎಲ್ ಕ್ರೇಜ್‍ನಲ್ಲಿದ್ದಾರೆ. ಹೀಗಿರುವಾಗ ತಮ್ಮ ಸಿನಿಮಾ ರಿಲೀಸ್ ಮಾಡೋದು ಸರೀನಾ? ಹತ್ತತ್ತು ಸಿನಿಮಾಗಳ ಜೊತೆ ಸ್ಪರ್ಧೆ ಮಾಡಿ ಗೆಲ್ಲೋದು ಸತ್ಯನಾ? ಹೀಗೊಂದಿಷ್ಟು ಪ್ರಶ್ನೆಗಳನ್ನೆ ಆಯಾ ಸಿನಿಮಾ ತಂಡ ಹಾಕಿಕೊಂಡರೆ ಬಹುಷಃ ಸಿನಿಮಾ ವಾರಕ್ಕೆ ಥಿಯೇಟರ್‍ನಿಂದ ಗೇಟ್‍ಪಾಸ್ ಪಡೆಯೋದಿಲ್ಲ ಅನ್ಸುತ್ತೆ.
ಇತ್ತೀಚೆಗೆ ವಾರಕ್ಕೆ ಐದು, ಹತ್ತು ಸಿನಿಮಾಗಳು ರಿಲೀಸ್ ಆಗ್ತಿವೆ. ದೊಡ್ಡ ದೊಡ್ಡ ಸಿನಿಮಾಗಳು ಅಖಾಡಕ್ಕೆ ಇಳಿಯೋದಕ್ಕೂ ಮುನ್ನ ನಮ್ಮ ಸಿನಿಮಾ ರಿಲೀಸ್ ಮಾಡಿ ಸೇಫ್ ಆಗಿ ಬಿಡಬೇಕು ಎನ್ನುವ ತರಾತುರಿಯಲ್ಲಿ ಕನ್ನಡ ಚಲನಚಿತ್ರ ನಿರ್ಮಾಪಕರುಗಳು ಚಿತ್ರ ಬಿಡುಗಡೆ ಮಾಡ್ತಿದ್ದಾರೆ. ಆದರೆ, ಒಂದೇ ವಾರ 10 ಪಿಕ್ಚರ್ ರಿಲೀಸ್ ಆದರೆ ಪ್ರೇಕ್ಷಕರು ಗೊಂದಲಕ್ಕೀಡಾಗುವುದು ಸಹಜ. ಯಾವುದೋ ಒಂದು ಮೂವೀ ನೋಡಿ ಮನೆಕಡೆ ಹೋದರೆ ಉಳಿದ ಪಿಕ್ಚರ್‍ಗಳು ಮಕಾಡೆ ಮಲಗೋದು ಗ್ಯಾರಂಟಿ. ಅದೇ ಪರಿಸ್ಥಿತಿ ಈಗ ಉಂಡೇನಾಮಕ್ಕೂ ಬಂದಿದೆ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ.
ಅಂದ್ಹಾಗೇ, ಉಂಡೇನಾಮ ಚಿತ್ರದ ಮೂಲಕ ಕಮಾಲ್ ಮಾಡಬೇಕು. ಸ್ಟ್ರಾಂಗ್ ಆಗಿ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಬೇಕು ಅಂತ ನಟ ಕೋಮಲ್ ಕೂಡ ಆಸೆಪಟ್ಟಿದ್ದರು. ಆದರೆ, ಗೋವಿಂದಾಯ ನಮಃ ತಂದುಕೊಟ್ಟ ಸ್ಟಾರ್‍ಢಮ್‍ನ ಉಂಡೇನಾಮ ಕೈಲಿ ಉಳಿಸಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ಅಷ್ಟಕ್ಕೂ, ಕೋಮಲ್ ಪಾತ್ರದ ಹೆಸರು ವೆಂಕಟೇಶ ಎನ್ನುವ ಕಾರಣಕ್ಕೆ ಉಂಡೇನಾಮ ಅಂತ ಟೈಟಲ್ ಇಟ್ಟಿದ್ದು ಚಿತ್ರಕ್ಕೆ ಪ್ಲಸ್ ಆಗಲಿಲ್ಲ. ಹಾಸ್ಯದ ರಸದೌತಣ ಉಣಬಡಿಸಿದರೂ ಅದು ಪ್ರೇಕ್ಷಕರ ಪಾಲಿಗೆ ಮೃಷ್ಟಾನ್ನ ಭೋಜನವಾಗಲಿಲ್ಲ. ಉಂಡೇನಾಮ ಮೂಲಕ ಮಾನವೀಯತೆಯ ಪಾಠ ಮಾಡಿದ್ರೂ ಅದ್ಯಾಕೋ ಕನ್ನಡ ಕಲಾಭಿಮಾನಿಗಳ ಹೃದಯ ತಟ್ಟಲಿಲ್ಲ. ಬಹುಷಃ ಉಂಡೇನಾಮ ಹಾಕಲಿಕ್ಕೆ ಬಂದು ಅವರೇ ಪಂಗನಾಮ ಹಾಕಿಸಿಕೊಂಡ್ರು ಅಂತ ಕಾಣತ್ತೆ? ಇನ್ಮೇಲೆ ಮೂರು ನಾಮ ಹಾಕೋಕೆ ಮುಂಚೆ ಎಚ್ಚರ ಎಚ್ಚರ ಎಚ್ಚರ