ಇಲ್ಲಿತನಕ ನಟ ಸತೀಶ್ ನೀನಾಸಂ ಸ್ಯಾಂಡಲ್ವುಡ್ ಸ್ಟಾರ್ ಆಗಿದ್ದರು. ಇನ್ಮೇಲೆ ಅವರು ಸೌತ್ ಇಂಡಿಯನ್ ಸ್ಟಾರ್ ಆಗಲಿದ್ದಾರೆ. ಅದೊಂದು ಸಿನಿಮಾದ ಮೂಲಕ ಪರಭಾಷಾ ಅಂಗಳದಲ್ಲಿ ಅದೃಷ್ಟ ಪರೀಕ್ಷೆಗಿಳಿಯುತ್ತಿದ್ದಾರೆ. ಕನ್ನಡದ ಚಿತ್ರದ ಮೂಲಕವೇ ಪ್ಯಾನ್ ಇಂಡಿಯಾ ತಲುಪೋದಕ್ಕೆ ರೆಡಿಯಾಗಿದ್ದಾರೆ. ಹಾಗಾದ್ರೆ ಆ ಚಿತ್ರ ಯಾವುದು? ಸದ್ದಿಲ್ಲದೇ ಸುನಾಮಿ ಎಬ್ಬಿಸಲು ಹೊರಟು ನಿಂತರಾ ಸತೀಶ್ ನೀನಾಸಂ? ಹೀಗೊಂದು ಕುತೂಹಲಕ್ಕೆ ತೆರೆಎಳೆಯುವ ಸ್ಟೋರಿ ಇಲ್ಲಿದೆ ನೋಡಿ
ಸ್ಯಾಂಡಲ್ವುಡ್ ನಟ ಸತೀಶ್ ನೀನಾಸಂ ಸೌತ್ ಇಂಡಿಯನ್ ಸ್ಟಾರ್ ಆಗಲಿಕ್ಕೆ ಹೊರಟಿದ್ದಾರೆ. ಅವರು ಹೊರಟು ನಿಂತಿದ್ದಾರೆ ಎಂಬುದಕ್ಕಿಂತ ಸತೀಶ್ನ ಸೌತ್ ಇಂಡಿಯನ್ ಸ್ಟಾರ್ ಮಾಡ್ಲೆಬೇಕು ಅಂತ ಪಣತೊಟ್ಟು ನಿಂತಂತಿದೆ ಆ ಚಿತ್ರ.. ಯಾವ ಚಿತ್ರ? ಈ ಕುತೂಹಲಕ್ಕೆ ಇಲ್ಲೇ ತೆರೆಎಳೆದು ಬಿಟ್ಟರೆ ನೀವು ಪೂರ್ತಿ ಪ್ಯಾರಾ ಓದಕ್ಕಿಲ್ಲ. ಹಿಂಗಾಗಿ, ಕೊಂಚ ಕಾಯಿಸಿ ಆ ಕ್ಯೂರಿಯಾಸಿಟಿಗೆ ಬ್ರೇಕ್ ಹಾಕ್ತೀವಿ.
ನಟ ಸತೀಶ್ ನೀನಾಸಂ ಕಳೆದ ಹದಿನೈದು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿದ್ದಾರೆ. ಬೀದಿನಾಟಕ, ಸೀರಿಯಲ್ಲು, ಸಿನಿಮಾ, ಹೀಗೆ ಒಂದೊಂದೆ ಹೆಜ್ಜೆ ಇಡುತ್ತಾ, ಸಣ್ಣಪುಟ್ಟ ಪಾತ್ರಗಳಿಗೆ ಜೀವತುಂಬುತ್ತಾ ಕೊನೆಗೆ ಸ್ಯಾಂಡಲ್ವುಡ್ ಸ್ಟಾರ್ ಆಗಿ ಬೆಳೆದು ನಿಂತಿದ್ದು ಒಂದು ಚರಿತ್ರೆಯೇ. ಹೀಗ್ಯಾಕೆ ಆ ಇತಿಹಾಸವನ್ನ ಮೆಲುಕು ಹಾಕುತ್ತಿದ್ದೇವೆ ಅಂದರೆ ಲೂಸಿಯಾ ಹೀರೋ ಸೌತ್ ಇಂಡಿಯನ್ ಸ್ಟಾರ್ ಆಗುವ ಹಾದಿಯಲ್ಲಿದ್ದಾರೆ ಅದಕ್ಕೆ.
ಕಳೆದ ಹದಿನೈದು ವರ್ಷದ ಸಿನಿಕರಿಯರ್ನಲ್ಲಿ ಸರಿಸುಮಾರು 30 ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಸೋಲು-ಗೆಲುವು ಎರಡನ್ನೂ ಕಂಡಿರುವ ಕ್ವಾಟ್ಲೇ ಹೀರೋ ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡ್ತಿದ್ದಾರೆ. `ಪಗೈವನುಕು ಅರುಳ್ವೈ’ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಸತೀಶ್ ನೀನಾಸಂ, ಈಗ ಕನ್ನಡ ಸಿನಿಮಾದ ಮೂಲಕವೇ ಪ್ಯಾನ್ ಇಂಡಿಯಾ ತಲುಪುವ ಖುಷಿಯಲ್ಲಿದ್ದಾರೆ
ಕೆಜಿಎಫ್ ಚಿತ್ರದ ನಂತರ ಕನ್ನಡದ ಸಿನಿಮಾಗಳು ಪ್ಯಾನ್ ಇಂಡಿಯಾ ತುಂಬೆಲ್ಲಾ ರಿಲೀಸ್ ಆಗ್ತಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಇದೇ ಮೊದಲ ಭಾರಿಗೆ ನಟ ಸತೀಶ್ ನೀನಾಸಂ ಅಭಿನಯಿಸಿರುವ ಅಶೋಕ ಬ್ಲೇಡ್ ಚಿತ್ರ ಪ್ಯಾನ್ ಇಂಡಿಯಾ ಹೋಗ್ತಿದೆ. ಕಾರ್ಮಿಕರು ಮತ್ತು ವರ್ತಕರ ನಡುವಿನ ಯುದ್ಧದ ಕಥೆಯನ್ನೊಳಗೊಂಡಿರುವ ಅಶೋಕ್ ಬ್ಲೇಡ್ ಅದ್ಧೂರಿಯಾಗಿ ನಿರ್ಮಾಣಗೊಂಡಿದೆ. ಕನ್ನಡ, ತೆಲುಗು, ತಮಿಳು ಮೂರು ಭಾಷೆಯಲ್ಲಿ ಪಿಕ್ಚರ್ ರಿಲೀಸ್ ಆಗ್ತಿದ್ದು, ಆಯಾ ಭಾಷೆಯ ಪ್ರೇಕ್ಷಕರು ನಮ್ಮ ಚಿತ್ರ ಕೈಹಿಡಿಯುತ್ತಾರೆ ಎಂಬ ಭರವಸೆ ಇದೆ ಎಂದಿದ್ದಾರೆ ನಟ ಸತೀಶ್ ನೀನಾಸಂ
ಅಶೋಕ ಬ್ಲೇಡ್ ಜೊತೆಗೆ ಮ್ಯಾಟ್ನೀ ಹಾಗೂ ದಸರಾ ಸಿನಿಮಾಗಳು ರಿಲೀಸ್ಗೆ ರೆಡಿಯಾಗಿವೆ. ಇದಲ್ಲದೇ ಮತ್ತೆ ಮೂರು ಸಿನಿಮಾಗಳಿಗೆ ಸಹಿ ಹಾಕಿದ್ದು, ಶೀಘ್ರದಲ್ಲೇ ಘೋಷಣೆಯಾಗಲಿವೆ ಎಂದಿದ್ದಾರೆ. ಸದ್ಯ, ಮಂಡ್ಯ ಜಿಲ್ಲೆಯ ಚುನಾವಣಾ ರಾಯಭಾರಿಯಾಗಿ ಆಯ್ಕೆಯಾಗಿರುವ ಲೂಸಿಯಾ ಹೀರೋ, ಮತದಾನದ ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಮತದಾನ ಮಾಡದೇ ದೂರುವುದಕ್ಕಿಂತ, ಮತದಾನದ ಮೂಲಕ ಬದಲಾವಣೆ ತರಲು ಪ್ರಯತ್ನಿಸಬೇಕು ಎಂದಿದ್ದಾರೆ.
ಎನಿವೇ ಒಂದೊಳ್ಳೆ ಕೆಲಸದಲ್ಲಿ ಸತೀಶ್ ನೀನಾಸಂ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ. ಇಂತಿಪ್ಪ ನಾಯಕನಿಗೆ ಒಳ್ಳೆದಾಗಬೇಕು. ಕಷ್ಟ-ಸುಖ, ಸೋಲು-ಗೆಲುವು ಎರಡನ್ನೂ ಕಂಡಿರೋ ಸತೀಶ್ ಸೌತ್ ಇಂಡಿಯನ್ ಸ್ಟಾರ್ ಆಗೋದ್ರ ಜೊತೆಗೆ ಪ್ಯಾನ್ ಇಂಡಿಯಾ ಹೀರೋ ಪಟ್ಟಕ್ಕೇರಿ ರಾರಾಜಿಸಬೇಕು ಎಂಬುದು ಅವರ ಅಭಿಮಾನಿಗಳ ಆಶಯ