ಮದುವೆ ಎಂಬುದು ಒಂದು ಪವಿತ್ರವಾದ ಬಂಧ. ಆ ಬಂಧ ಕೆಲವರ ಬಾಳಲ್ಲಿ ಬಂಧನ ದಂತಾಗುತ್ತೆ . ಎಷ್ಟು ಬೇಗ ಈ ಬಂಧನದಿಂದ ಮುಕ್ತಿ ಸಿಗುತ್ತಪ್ಪ ಎನ್ನುವ ಸಂದರ್ಭ ಸೃಷ್ಟಿಯಾಗುತ್ತೆ. ಇಂತಹದ್ದೊಂದು ಸಂದರ್ಭ, ಸನ್ನಿವೇಶ ಸೌತ್ ಸಿನಿಮಾ ಇಂಡಸ್ಟ್ರಿಯ ಈ ನಟ-ನಟಿಯರ ಜೀವನದಲ್ಲೂ ಎದುರಾಗಿತ್ತಾ ? ಅಥವಾ ಮತ್ತಿನ್ಯಾವುದಾದ್ರೂ ಕಾರಣಕ್ಕೆ ಈ ಸ್ಟಾರ್ ಕಲಾವಿದರ ಬದುಕಲ್ಲಿ ಬಿರುಗಾಳಿ ಎದ್ದಿತ್ತಾ ಗೊತ್ತಿಲ್ಲ. ಆದರೆ, ದಕ್ಷಿಣ ಭಾರತದ ಕೆಲವು ಖ್ಯಾತನಾಮರ ಬದುಕು ಮೂರಾಬಟ್ಟೆಯಾಗಿದ್ದಂತೂ ಸತ್ಯ. ಕೊನೆಗೆ ಮರುಮದುವೆಗಳಾಗುವ ಮೂಲಕ ಅವರೆಲ್ಲರ ದಾಂಪತ್ಯ ಜೀವನ ಸುಖಮಯವಾಗಿದ್ದೂ ದಿಟ. ಹಾಗಾದ್ರೆ, ಸೌತ್ ಸಿನಿಮಾ ಇಂಡಸ್ಟ್ರಿಯ ಯಾವೆಲ್ಲ ನಟ-ನಟಿಯರು ಮರುಮದುವೆಯಾಗಿದ್ದಾರೆ? ಎರಡನೇ ಭಾರಿ ಹಸೆಮಣೆ ಏರಿ ಕೊನೆಗೆ ಆ ದಾಂಪತ್ಯವೂ ಮುರಿದುಬಿದ್ದಾಗ ಮೂರನೇ ಭಾರಿ ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದವರು ಯಾರ್ಯಾರು? ಈಗ ಅವರೆಲ್ಲ ಹೇಗಿದ್ದಾರೆ? ಯಾರ್ಯಾರ ಜೊತೆ ಲೈಫ್‍ನಲ್ಲಿ ಸೆಟೆಲ್ ಆಗಿದ್ದಾರೆ ನೋಡೋಣ ಬನ್ನಿ.
ಲಕ್ಷ್ಮೀ ಕೈ ಬಿಟ್ಟು ಅಮಲ ಕೈಹಿಡಿದರು ಅಕ್ಕಿನೇನಿ ನಾಗಾರ್ಜುನ್
ಟಾಲಿವುಡ್ ಸೂಪರ್ ಸ್ಟಾರ್ ಅಕ್ಕಿನೇನಿ ನಾಗಾರ್ಜುನ ಅವರು ಮೊದಲು ರಾಮನಾಯ್ಡು ದಗ್ಗುಬಾಟಿ ಅವರ ಮಗಳು ಲಕ್ಷ್ಮೀ ದಗ್ಗುಬಾಟಿ ಜೊತೆ 1984ರಲ್ಲಿ ಅರೇಂಜ್ ಮ್ಯಾರೇಜ್ ಆಗಿದ್ದರು. ಕೆಲವು ವರ್ಷಗಳ ನಂತ್ರ ಇವರಿಬ್ಬರ ಮಧ್ಯೆ ಮನಸ್ತಾಪ ಬಂದು ದೂರ ಆದರು, ಆ ವೇಳೆಗೆ ಲಕ್ಷ್ಮೀ ಅವರು ನಾಗಚೈತನ್ಯಗೆ ಜನ್ಮ ನೀಡಿದ್ದರು. ಆ ನಂತರ ನಾಗಾರ್ಜುನ ಅವರು ನಟಿ ಅಮಲಾರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ಅಖಿಲ್ ಎಂಬ ಮಗನಿದ್ದಾನೆ. ಮೊದಲ ಹೆಂಡತಿಯ ಮಗನಾದ ನಾಗಚೈತನ್ಯ ನಾಗಾರ್ಜುನ ಅವರ ಕುಟುಂಬದ ಜೊತೆಗೆ ಬೆಳೆದು ದೊಡ್ಡವನಾಗಿ ಈಗ ಟಾಲಿವುಡ್ ನ ಬಹುಬೇಡಿಕೆಯ ನಟರ ಸಾಲಿನಲ್ಲಿ ನಿಂತಿದ್ದಾರೆ. ಈಗ ನಾಗಚೈತನ್ಯ ಅವರಿಗೂ ಕೂಡ ಸಮಂತಾ ಜೊತೆಗೆ ವಿಚ್ಛೇದನವಾಗಿದೆ. ನಾಗಾರ್ಜುನ ಹಾಗು ಅಮಲಾ ದಂಪತಿಯ ಮಗ ಅಖಿಲ್-ಶ್ರೀಯಾ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿದೆ.

ಮೂರು ಭಾರಿ ಸಪ್ತಪದಿ ತುಳಿದಿದ್ದರು ಜೂಲಿ ಲಕ್ಷ್ಮೀ
ಜೂಲಿ ಲಕ್ಷ್ಮಿ ಅಂತಲೇ ಫೇಮಸ್ ಆಗಿರುವ ಕನ್ನಡ, ತೆಲುಗು, ತಮಿಳು ಸಿನಿಮಾಗಳಲ್ಲಿ ಖ್ಯಾತಿ ಪಡೆದಿರುವ ಲಕ್ಷ್ಮೀ ಅವರು ಮೂರು ಬಾರಿ ಮದುವೆ ಆಗಿದ್ದಾರೆ ಅಂದ್ರೆ ನೀವು ನಂಬಲೇ ಬೇಕು. ಭಾಸ್ಕರನ್ ಎನ್ನುವವರ ಜೊತೆ ಲಕ್ಷ್ಮೀ ಮೊದಲ ಬಾರಿಗೆ ಮದುವೆಯಾಗಿ ಐಶ್ವರ್ಯಾಗೆ ಜನ್ಮನೀಡಿದ್ದರು. ಆನಂತರ ಇವರಿಬ್ಬರು ಮನಸ್ತಾಪ ಬಂದು ಬೇರೆ ಆದ್ರು. ನಂತರ ಒಬ್ಬಂಟಿಯಾಗಿದ್ದ ಲಕ್ಷ್ಮಿಗೆ ಸಿನಿಮಾ ಸೆಟ್‌ನಲ್ಲಿ ಮೋಹನ್ ಶರ್ಮಾರ ಪರಿಚಯ ಆಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಪ್ರೀತಿಯಾಗಿ ತದ ನಂತ್ರ 1975ರಲ್ಲಿ ಇವರಿಬ್ಬರು ಮದುವೆಯಾದರು. ಅದ್ರೆ ಈ ಸಂಬಂಧವೂ ಕೇವಲ ೫ ವರ್ಷಗಳಲ್ಲೇ ಅಂತ್ಯವಾಯ್ತು. ಹೀಗೆ ನಟಿ ಲಕ್ಷ್ಮಿಯ ೨ ನೇ ಮದುವೆಯೂ ಮುರಿದು ಬಿತ್ತು. ಮತ್ತೆ ಸಿನಿಮಾ ಶೂಟಿಂಗ್ ವೇಳೆ ಲಕ್ಷ್ಮೀ ಅವರಿಗೆ ನಿರ್ದೇಶಕ ಎಂ ಸವಿಚಂದ್ರನ್ ಎನ್ನುವವರ ಜೊತೆ ಪ್ರೀತಿ ಹುಟ್ಟಿ, ಮದುವೆ ಕೂಡ ಆದರು. 2000ರಲ್ಲಿ ಇವರಿಬ್ಬರು ಮೊದಲ ಮಗು ಸಂಯುಕ್ತಾ ಎನ್ನುವವಳನ್ನು ದತ್ತು ಪಡೆದುಕೊಂಡರು.
ರಾಧಿಕಾ 3 ಮದ್ವೆಯಾಗಿರುವ ವಿಚಾರ ಗೊತ್ತಿದ್ರೂ ಕೈಹಿಡಿದ ಶರತ್
ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಸರು ಮಾಡಿರುವ ಶರತ್‌ಕುಮಾರ್ ಅವರು 1984ರಲ್ಲಿ ಛಾಯಾ ದೇವಿ ಜೊತೆಗೆ ಮದುವೆಯ ಬಂಧನಕ್ಕೊಳಗಾಗಿದ್ದರು. ವರಲಕ್ಷ್ಮೀ, ಪೂಜಾ ಎಂಬ ಇಬ್ಬರು ಮಕ್ಕಳ ಆನಂತರ ಇವರಿಬ್ಬರು 2000ರಲ್ಲಿ ಬೇರೆ ಆದರು. 2001ರಲ್ಲಿ ಶರತ್‌ಕುಮಾರ್, ರಾಧಿಕಾ ಅವರನ್ನ ಮದುವೆಯಾದರು. ಆದ್ರೆ ರಾಧಿಕಾಗೆ ಇದು 3 ಮದುವೆ. ನಟಿ ರಾಧಿಕಾ ಶರತ್‌ಕುಮಾರ್ ಅವರು 1985ರಲ್ಲಿ ಪ್ರತಾಪ್ ಪೋತಾನ್ ಎನ್ನುವವರ ಜೊತೆ ಮೊದಲ ಮದುವೆಯಾಗಿದ್ದರು. 1986ರಲ್ಲಿ ಈ ಸಂಬಂಧ ಮುರಿದು ಬಿದ್ದ ನಂತ್ರ,1990ರಲ್ಲಿ ರಿಚರ್ಡ್ ಹಾರ್ಡಿ ಜೊತೆ ರಾಧಿಕಾ ಅವರು 2ನೇ ಮದುವೆಯಾದರು. ಈ ಜೋಡಿಗೆ ರಯಾನೆ ಹಾರ್ಡಿ ಎಂಬ ಮಗಳು ಜನಿಸಿದಳು. ಬಟ್ ಈ ಸಂಬಂದವೂ ಕೇವಲ 2 ವರ್ಷಗಳಲ್ಲೇ ಮುರಿದು ಹೋಗಿ, 1992ರಲ್ಲಿ ಇವರಿಬ್ಬರು ವಿಚ್ಛೇದನ ಪಡೆದರು. ಕೆಲವು ವರ್ಷಗಳ ಬಳಿಕ ಅಂದ್ರೆ,2001ರಲ್ಲಿ ನಟ ಶರತ್ ಕುಮಾರ್ ಜೊತೆ ರಾಧಿಕಾ ತಮ್ಮ ಮೂರನೇ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ರಾಹುಲ್ ಎಂಬ ಮಗನಿದ್ದಾನೆ.
2 ಮದುವೆಯಾದರೂ ಲಿವ್ ಇನ್ ರಿಲೇಷನ್‍ಶಿಪ್‍ನಲ್ಲಿದ್ದರು ಕಮಲ್
ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಮಲ್ ಹಾಸನ್ ಸಹ ತಮ್ಮ ದಾಂಪತ್ಯ ಜೀವನದಲ್ಲಿ ಸಾಕಷ್ಟು ಏಳು-ಬೀಳುಗಳನ್ನ ಕಂಡಿದ್ದಾರೆ. ಮೊದಲು ವಾಣಿ ಗಣಪತಿ ಎಂಬುವವರ ಜೊತೆ ಮದುವೆಯಾಗಿದ್ದ ಇವರು, ಹೊಂದಾಣಿಕೆಯ ಕೊರತೆಯಿಂದಅವರಿಗೆ ವಿಚ್ಛೇದನ ನೀಡಿ, ಸಾರಿಕಾ ಠಾಕೂರ್ ಜೊತೆ 2 ನೇ ಮದುವೆಯಾದರು. ಇವರಿಗೆ ಶ್ರುತಿಹಾಸನ್ ಹಾಗೂ ಅಕ್ಷರ ಹಾಸನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರು ಕೂಡ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿದ್ದಾರೆ.ಆದರೆ ಸಾರಿಕಾ ಜೊತೆಗಿನ ಮನಸ್ತಾಪದಿಂದ ವಿಚ್ಛೇದನ ಮೊರೆ ಹೋದ ಕಮಲ್ ಹಾಸನ್, ನಟಿ ಗೌತಮಿ ಜೊತೆ ರಿಲೇಶನ್‌ಶಿಪ್‌ನಲ್ಲಿದ್ದರು. ಮದುವೆ ಆಗದೇ ಇದ್ದ ಇವರಿಬ್ಬರ ಸಂಬಂಧವೂ ಸಹ 2016ರಲ್ಲಿ ಅಧಿಕೃತವಾಗಿ ಅಂತ್ಯವಾಯ್ತು.
ಮದುವೆ ಮೇಲೆ ಮದುವೆಯಾದ್ರು ಪವರ್ ಸ್ಟಾರ್ ಪವನ್ ಕಲ್ಯಾಣ್
‘ಪವರ್ ಸ್ಟಾರ್’ ಪವನ್ ಕಲ್ಯಾಣ್ ಅವರು ಮೂರು ಬಾರಿ ಮದುವೆಯಾಗಿದ್ದಾರೆ. ಮೊದಲ ಬಾರಿಗೆ ಪವನ್ ಅವರು 1997ರಲ್ಲಿ ನಂದಿನಿ ಜೊತೆ ಅರೇಂಜ್ ಮ್ಯಾರೇಜ್ ಮಾಡಿಕೊಂಡಿದ್ದರು. ಇವರಿಬ್ಬರಿಗೆ ಕಾರಣಾಂತರಗಳಿಂದ ಡಿವೋರ್ಸ್ ಆದ ಬಳಿಕ,2001ರಲ್ಲಿ ನಟಿ ರೇಣು ದೇಸಾಯಿ ಜೊತೆ ಪವನ್ ಕಲ್ಯಾಣ್ ಡೇಟ್ ಮಾಡಲು ಆರಂಭಿಸಿದ್ದರು. 2004ರಲ್ಲಿ ಈ ಜೋಡಿಗೆ ಅಕಿರಾ ನಂದನ್ ಎಂಬ ಮಗ ಹುಟ್ಟಿದ್ದನು. ಒಟ್ಟೂ 8 ವರ್ಷಗಳ ಕಾಲ ರೇಣು, ಪವನ್ ಕಲ್ಯಾಣ್ ಜೊತೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿದ್ದರು. ಆಮೇಲೆ 2009ರಲ್ಲಿ ಇವರಿಬ್ಬರೂ ಮದುವೆಯಾದರು. 2010ರಲ್ಲಿ ಈ ಜೋಡಿ ಮತ್ತೆ ಆದ್ಯಾ ಎಂಬ ಮಗಳನ್ನು ಪಡೆದರು. ಈ ಜೋಡಿಯ ಮಧ್ಯೆ ಮನಸ್ತಾಪ ಬಂದು ಇವರಿಬ್ಬರು 2012ರಲ್ಲಿ ವಿಚ್ಛೇದನ ಪಡೆದರು.ಇಲ್ಲಿಗೆ 2 ನೇ ಮದುವೆಯನ್ನೂ ಮುರಿದುಕೊಂಡ ಪವರ್ ಸ್ಟಾರ್, ಕೊನೆಗೆ 2013ರಲ್ಲಿ ಅನ್ನಾ ಲೆಜ್ನೆವಾ ಎನ್ನುವವರ ಜೊತೆ ಪವನ್ ಮೂರನೇ ಮದುವೆಯಾದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
ಎರಡು ಭಾರಿ ಹಸೆಮಣೆ ಏರಿದರು ರೈ
ಬಹುಭಾಷ ನಟ ಪ್ರಕಾಶ್ ರೈ ಅವರು ಮೊದಲು ಲಲಿತಾ ಕುಮಾರಿ ಎನ್ನುವವರನ್ನು ಮದುವೆಯಾಗಿದ್ದರು. ಇವರಿಗೆ ಒಬ್ಬ ಗಂಡು, ಇಬ್ಬರು ಹೆಣ್ಣು ಮಕ್ಕಳಿದ್ದರು. ಆದರೆ ದುರಂತವೊಂದರಲ್ಲಿ ಪ್ರಕಾಶ್ ರೈ ಮಗ ಸಿದ್ದುವನ್ನು ಕಳೆದುಕೊಂಡರು. ಆ ನಂತರ ಬಂದ ಭಿನ್ನಾಭಿಪ್ರಾಯಗಳಿಂದ ಮೊದಲ ಪತ್ನಿಯಿಂದ ವಿಚ್ಛೇದನ ಪಡೆದ ಪ್ರಕಾಶ್ ರೈ ಅವರಿಗೆ ಕೊರಿಯೋಗ್ರಾಫರ್ ಪೋನಿ ಜೊತೆ ಪ್ರೇಮಾಂಕುರವಾಯಿತು. ಎರಡನೇ ಮದುವೆಯಾದ ಇವರಿಬ್ಬರ ದಾಂಪತ್ಯಕ್ಕೆ ವೇದಾಂತ್ ಎಂಬ ಮಗನಿದ್ದಾನೆ.
ಇಷ್ಟೇ ಅಲ್ಲಾ ಸ್ಯಾಂಡಲ್ ವುಡ್ ನ ನಟಿ ಸುಧಾರಣಿ,ಟೈಗರ್ ಪ್ರಭಾಕರ್,ದುನಿಯಾ ವಿಜಯ್, ಖ್ಯಾತ ನಟ ವಿಜಯ್‌ಕುಮಾರ್ ಅವರ ಮಗಳು ವನಿತಾ ಹೀಗೆ ಪಟ್ಟಿ ಮಾಡುತ್ತಾ ಹೋದ್ರೆ ಬೆಳೆಯುತ್ತಲೇ ಇರುವಷ್ಟು ಕಲಾವಿದರು ತಮ್ಮ ಮದುವೆಯ ಬಂಧನವನ್ನ ಮೂರ್ನಾಲ್ಕು ಬಾರಿ ಬೆಸೆದಿರುವ ಉದಾಹರಣೆಗಳಿವೆ.ಬಾಲಿವುಡ್ , ಟಾಲಿವುಡ್, ಕಾಲಿವುಡ್ ಹೀಗೆ ಎಲ್ಲಾ ಕಡೆ ಎರಡು ಮೂರು ಮದುವೆಯಾದ ನಟ ನಟಿ, ನಿರ್ದೇಶಕರು ಇದ್ದಾರೆ. ಇನ್ನು ಕೆಲವರು ಮೊದಲ ಮದುವೆ ಮುರಿದುಕೊಂಡು ಒಬ್ಬಂಟಿಯಾಗೇ ಜೀವನ ಸಾಗಿಸುತ್ತಿರುವ ಉದಾಹರಣೆಗಳೂ ಸಹ ಇವೆ.