ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ನಟಿ ಸಾಯಿ ಪಲ್ಲವಿ ಇತ್ತೀಚಿಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಹೊಸ ಸಿನಿಮಾದ ಘೋಷಣೆಯೂ ಇಲ್ಲ, ಯಾವುದೇ ಅಪ್‌ಡೇಟ್ ಇಲ್ಲ. ಹಾಗಾದ್ರೆ, ಎಲ್ಲೋದ್ರು ಸಹಜ ಸುಂದರಿ ಹೀಗೊಂದು ಪ್ರಶ್ನೆ ಕಾಡೋದು ಸಹಜ. ಆ ಪ್ರಶ್ನೆಗೆ ಉತ್ತರ ಕೊಡುವುದರ ಜೊತೆಗೆ ಮಲಾರ್ ಬ್ಯೂಟಿಯ ಮುಂದಿನ ನಡೆಯೇನು? ಸದ್ಯ ಏನ್ಮಾಡ್ತಿದ್ದಾರೆ ರೌಡಿಬೇಬಿ ಅನ್ನೋದನ್ನ ಹೇಳ್ತೀವಿ ಕೇಳಿ.
ಸಾಯಿ ಪಲ್ಲವಿ ಸಹಜ ಸೌಂದರ್ಯಕ್ಕೆ, ನೈಜ ಅಭಿನಯಕ್ಕೆ ಹೆಸರುವಾಸಿಯಾದವರು. ತಮ್ಮ ಅಮೋಘ ನೃತ್ಯದಿಂದ, ಕ್ಯೂಟ್ ಸ್ಮೈಲ್‍ನಿಂದ ಸಿನಿಮಾಪ್ರೇಮಿಗಳನ್ನ ಕಟ್ಟಿಹಾಕಿದ್ದರು. ಆದರೆ, ಕಳೆದೊಂದು ವರ್ಷದಿಂದ ಯಾರ ಕಣ್ಣಿಗೂ ಕಾಣಿಸುತ್ತಿಲ್ಲ.’ಗಾರ್ಗಿ’ ಸಿನಿಮಾ ಬಳಿಕ ಸಾಯಿ ಪಲ್ಲವಿಯ ಯಾವ ಸಿನಿಮಾವೂ ರಿಲೀಸ್ ಆಗಿಲ್ಲ, ಶೂಟಿಂಗ್‌ನಲ್ಲಿ ಬ್ಯುಸಿಯಾಗಿಯೂ ಇಲ್ಲ. ಪ್ರೇಮಂ ಬ್ಯೂಟಿಯ ಸಿನಿಮಾ, ಲೈಫ್ ಬಗ್ಗೆ ಯಾವುದೇ ಅಪ್‌ಡೇಟ್ ಹೊರಬಿದ್ದಿಲ್ಲದ ಕಾರಣ ನೂರೆಂಟು ಅನುಮಾನಗಳು ಎದ್ದಿವೆ.
ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಸ್ಟಾರ್ ಹೀರೋಯಿನ್ ಆಗಿ ಮಿಂಚಿದ, ಬಹುಬೇಡಿಕೆ ನಟಿಯಾಗಿದ್ದ ವೆನ್ನೆಲಾಗೆ ಚಿತ್ರರಂಗದಲ್ಲಿ ಡಿಮ್ಯಾಂಡ್ ಕಡಿಮೆ ಆಗಿದ್ಯಾ? ಫಿದಾ ಚೆಲುವೆ ಕ್ರೇಜ್ ಕಮ್ಮಿಯಾಯ್ತಾ? ಹೀಗಾಗಿಯೇ ಸಾಯಿ ಪಲ್ಲವಿನಾ ಸೈಡ್‍ಲೈನ್ ಮಾಡಿದ್ರಾ? ಅಥವಾ ರೌಡಿಬೇಬಿನೇ ಚಿತ್ರರಂಗದಿಂದ ದೂರ ಉಳಿಯಲು ನಿರ್ಧರಿಸಿದ್ರಾ? ಇದ್ಯಾವ ಪ್ರಶ್ನೆಗೂ ಉತ್ತರ ಸಿಗ್ತಾಯಿಲ್ಲ. ಆದರೆ, ಗಾಸಿಪ್ ಲೋಕ ಮಾತ್ರ ಅದೊಂದು ಸುದ್ದಿನಾ ಹಿಡಿದು ಎಳೆದಾಡ್ತಿದೆ. `ವಿರಾಟ ಪರ್ವಂ’ ಸಿನಿಮಾ ಪ್ರಮೋಷನ್ ವೇಳೆ ಸಾಯಿ ಪಲ್ಲವಿ ಕೊಟ್ಟಿದ್ದ ಹೇಳಿಕೆಯೇ ಮಲಾರ್ ಚೆಲುವೆಯ ಸಿನಿಕರಿಯರ್ ಗೆ ಮುಳುವಾಗ್ತಿದೆ ಅನ್ನೋ ಮಾತು ಸಾಕಷ್ಟು ಚರ್ಚೆಯಲ್ಲಿದೆ. ಅಷ್ಟಕ್ಕೂ ನಟಿ ಸಾಯಿ ಪಲ್ಲವಿ ಪ್ರಚಾರದ ಸಮಯದಲ್ಲಿ ಹೇಳಿದ್ದೇನು ಅಂದರೆ ? ಕಾಶ್ಮೀರಿ ಪಂಡಿತರ ಮೇಲಿನ ಹತ್ಯಾಕಾಂಡಕ್ಕೂ, ಗೋ ಸಾಗಾಣಿಕೆ ಮಾಡುವ ವ್ಯಕ್ತಿಯ ಮೇಲಿನ ಹಲ್ಲೆಗೂ ಏನ್ ವ್ಯತ್ಯಾಸ ಇದೆ ಹೇಳಿ ನೋಡೋಣ ಅಂತ ಪ್ರಶ್ನೆ ಮಾಡುವ ಮೂಲಕ ಸಾಯಿ ಪಲ್ಲವಿ ಹಿಂದೂಗಳ ಕೆಂಗಣ್ಣಿಗೆ ಗುರಿಯಾಗಿದ್ದರು
ಅಂದ್ಹಾಗೇ, ನಟಿ ಸಾಯಿಪಲ್ಲವಿ ಚಿತ್ರರಂಗಕ್ಕೆ ಬಂದು ಹೆಚ್ಚುಕಮ್ಮಿ ಒಂದು ದಶಕ ಕಳೀತಾಯಿದೆ. ಈ ಒಂದು ದಶಕದಲ್ಲಿ ಒಂದಿಡಿ ಜೀವಮಾನಕ್ಕಾಗುವಷ್ಟು ಜನಪ್ರಿಯತೆನಾ ಗಳಿಸಿಕೊಂಡಿದ್ದಾರೆ. ಬೆಲೆಯೇ ಕಟ್ಟಲಾಗದ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ತೆಲುಗು, ತಮಿಳು, ಮಲೆಯಾಳಂನಲ್ಲಿ ಕೆಲ ಸೂಪರ್ ಸ್ಟಾರ್ಸ್ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಕಡಿಮೆ ಸಿನಿಮಾಗಳಿಗೆ ಬಣ್ಣ ಹಚ್ಚಿದ್ರೂ ಪ್ರೇಕ್ಷಕರ ಮನಸ್ಸಲ್ಲಿ ಉಳಿಯುವಂತಹ ಪಾತ್ರಗಳಿಗೆ ಜೀವತುಂಬಿದ್ದಾರೆ. ಗಾರ್ಗಿ ನಂತರ ಚಿತ್ರರಂಗದಿಂದ ದೂರ ಉಳಿದಿರುವ ಕಾರಣಕ್ಕೆ ಮಲಾರ್ ಸುಂದರಿ ಸಿನಿಮಾಲೋಕಕ್ಕೆ ಗುಡ್‍ಬೈ ಹೇಳ್ತಾರಾ? ಹೀಗೊಂದು ಸಂಶಯವಂತೂ ಮೂಡಿದೆ.
ಸದ್ಯ ಸಿನಿಮಾ ಜಗತ್ತಿನಿಂದ ಬ್ರೇಕ್ ತೆಗೆದುಕೊಂಡು, ಸ್ವಂತ ಆಸ್ಪತ್ರೆಯನ್ನು ನಿರ್ಮಿಸುವ ಕಡೆ ಸಂಪೂರ್ಣವಾಗಿ ಗಮನಹರಿಸುತ್ತಿದ್ದಾರೆ ಅನ್ನೋ ಸುದ್ದಿ ಹಬ್ಬಿದೆ. ಆಸ್ಪತ್ರೆಯನ್ನು ಸಾಯಿ ಪಲ್ಲವಿ ಹಾಗೂ ಸಹೋದರಿ ಪೂಜಾ ಕಣ್ಣನ್ ಜೊತೆಯಾಗಿ ನಿರ್ವಹಿಸಲಿದ್ದಾರೆ ಎನ್ನಲಾಗುತ್ತಿದೆ. ಅಂದ್ಹಾಗೇ ಸಾಯಿ ಪಲ್ಲವಿ 2016 ರಲ್ಲಿ ಅಮೆರಿಕದ ಜಾರ್ಜಿಯಾದಲ್ಲಿನ ವೈದ್ಯಕೀಯ ಶಾಲೆಯಿಂದ ಎಂಬಿಬಿಎಸ್ ಪದವಿಯನ್ನು ಪಡೆದುಕೊಂಡಿದ್ದಾರೆ. ಕಲೆ ಕೈ ಬೀಸಿ ಕರೆದಿದ್ದರಿಂದ ಬಣ್ಣದ ಜಗತ್ತಿಗೆ ಬಂದಿದ್ದರು. ಇದ್ದಷ್ಟು ದಿನ ಏನೆಲ್ಲಾ ಸಾಹಸ ಮಾಡ್ಬೇಕಿತ್ತು, ಏನೆಲ್ಲಾ ಸಾಧನೆ ಮಾಡ್ಬೇಕಿತ್ತು ಅದನ್ನು ಮಾಡಿಮುಗಿಸಿದ್ದಾರೆ. ಇದೀಗ, ತಮ್ಮ ಮುಂದಿನ ಗುರಿಯ ಕಡೆಗೆ ಗಮನಹರಿಸಿದ್ದು, ವೈದ್ಯಕೀಯ ಕ್ಷೇತ್ರದ ಕಡೆ ತಿರುಗಿದ್ದಾರೆ. ನೋಡೋಣ ಮಲಾರ್ ಬ್ಯೂಟಿ ಮತ್ತೆ ಮಾಯಲೋಕಕ್ಕೆ ಬರ್ತಾರಾ? ಆಕೆಯ ಪ್ರತಿಭೆಗೆ ಚಿತ್ರರಂಗ ರೆಡ್‍ಕಾರ್ಪೆಟ್ ಹಾಕಿ ಕರೆತರುತ್ತಾ ಅಂತ.