ಚಿತ್ರರಂಗದಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ ಚಿತ್ರಗಳು ಬಂದಿವೆ. ತಮ್ಮ ನೆಚ್ಚಿನ ವ್ಯಕ್ತಿಗಳ ಜೀವನ ಕಥೆಗಳು ಸಿನೆಮಾವಾಗಿ ಪರದೆ ಮೇಲೆ ಮೂಡಿ ಬಂದಾದ ಅತೀವ ಆಸಕ್ತಿ ಇಂದ ಜನ ಅದನ್ನು ಮೆಚ್ಚಿ ,ಅಪ್ಪಿ ಒಪ್ಪಿ ಗೆಲ್ಲಿಸಿದ ಉದಾಹರಣೆಗಳಿವೆ. ಈ ಸಾಲಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿದಾಗ,ಅವರ ಬಯೋಪಿಕ್ ಸಿನೆಮಾವಾಗಲಿದೆ ಎಂಬ ಸುದ್ದಿ ಕೇಳಿದಾಗ ಅವರ ಅಭಿಮಾನಿಗಳಿಗೆ ಸಂತೋಷವಾಗಿತ್ತು. ಆದ್ರೆ ಅ ವಿಚಾರ ತಣ್ಣಗಾಗಿತ್ತು. ಈ ಚಿತ್ರತಂಡ ಯಾವುದೇ ಮಾಹಿತಿಯನ್ನ ಅಧಿಕೃತವಾಗಿ ಘೋಷಿಸದೇ ಇರೋದು ಅವರ ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಈಗ ಮತ್ತೆ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರ ಬಯೋಪಿಕ್ ಬರೋದು ಖಾತ್ರಿಯಾಗಿದ್ದು,ಈ ಬಗ್ಗೆ ಒಂದಿಷ್ಟು ಅಪ್ಡೇಟ್ ದೊರಕಿವೆ.
ಯಸ್ ಸಿದ್ದರಾಮಯ್ಯ ಅವರ ಕುರಿತಾದ ಚಿತ್ರಕ್ಕೆ ಸದ್ಯದಲ್ಲೇ ಚಾಲನೆ ಸಿಗಲಿದ್ದು, ಈಗಾಗಲೇ ಸಿನಿಮಾದ ಸ್ಕ್ರಿಪ್ಟ್ ಸೇರಿದಂತೆ ಹಲವು ಕೆಲಸಗಳಲ್ಲಿ ಬ್ಯುಸಿಯಾಗಿರುವ ಚಿತ್ರತಂಡ, ಕಲಾವಿದರ ಆಯ್ಕೆಯಲ್ಲಿ ನಿರತವಾಗಿದೆ ಎಂಬ ಮಾಹಿತಿ ಇದೆ. ಈ ಸಿನೆಮಾವನ್ನು ಸತ್ಯರತ್ನಂ ನಿರ್ದೇಶನ ಮಾಡಲು ಸಜ್ಜಾಗಿದ್ದು, ‘ಲೀಡರ್ ರಾಮಯ್ಯ’ ಎಂಬ ಟೈಟಲ್ ಫಿಕ್ಸ್ ಮಾಡಲಾಗಿದ್ಯಂತೆ.ಇನ್ನು ಈ ಬಗ್ಗೆ ಹಲವು ಸಚಿವರೊಂದಿಗಿನ ಮಾತುಕತೆ ಜೊತೆ ಸ್ವತಃ ಸಿದ್ದರಾಮಯ್ಯ ನವರೂ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎನ್ನಲಾಗಿದೆ.
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಶೈಲಿಯಲ್ಲಿ ಛಾಪು ಮೂಡಿಸಿರುವ ಸಿದ್ದರಾಮಯ್ಯ ಅವರ ಜೀವನ ಚರಿತ್ರೆಯನ್ನ ಪಾರ್ಟ್ ೧ ಹಾಗು ಪಾರ್ಟ್ ೨ ಭಾಗವಾಗಿ ಬೆಳ್ಳಿಪರದೆಯಲ್ಲಿ ಬಿಚ್ಚಿಡಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಪಾರ್ಟ್ ೧ ನಲ್ಲಿ ಅವರ ಯೌವ್ವನ ಹಾಗು ಪಾರ್ಟ್ ೨ ನಲ್ಲಿ ಸಿದ್ದರಾಮಯ್ಯ ಲಾಯರ್ ಆಗಿದ್ದ ದಿನಗಳು ಹಾಗು ಮುಂದಿನ ರಾಜಕೀಯ ಜೀವನದ ಕಥೆ ಇರಲಿದ್ದು, ಪ್ಯಾನ್ ಇಂಡಿಯಾ ಸಿನೆಮಾವಾಗಿ ತೆರೆಗೆ ತರಲು ಪ್ಲಾನ್ ಮಾಡಲಾಗಿದೆ. ಯಾಕಂದ್ರೆ ಸಿದ್ದರಾಮಯ್ಯ ಬರೀ ಕರ್ನಾಟಕದಲ್ಲಿ ಮಾತ್ರವಲ್ಲದೇ ಇತರ ರಾಜ್ಯಕ್ಕೂ ಅಷ್ಟೇ ಚಿರಪರಿಚಿತ ಅನ್ನೋದನ್ನ ಗಮನದಲ್ಲಿಟ್ಟುಕೊಂಡೇ ಗಂಗಾವತಿ ಹಯಾತ್ ಪೀರ್ ಸಾಬ್ ಅವರ ನೇತೃತ್ವದ ಎಮ್ಎಸ್ ಕ್ರಿಯೇಷನ್ಸ್ ಬ್ಯಾನರ್ ಅಡಿ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಹೈ ಬಜೆಟ್ನಲ್ಲಿ 50 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ಚಿತ್ರಕ್ಕೆ ಬಂಡವಾಳ ಹೂಡಲಿದ್ದಾರೆ.
ಇನ್ನೊಂದು ಇಂಟ್ರೆಸ್ಟಿಂಗ್ ಸಂಗತಿ ಅಂದ್ರೆ ಈ ಬಯೋಪಿಕ್ ಚಿತ್ರದ ಪಾರ್ಟ್ ೧ ಕ್ಕೆ ನಿರೂಪ್ ಭಂಡಾರಿ ನಾಯಕರಾಗಿ ನಟಿಸಲಿದ್ದಾರಂತೆ. ಈಗಾಗಲೇ ನಿರೂಪ್ ಅವರನ್ನು ಚಿತ್ರತಂಡ ಭೇಟಿ ಕೂಡ ಮಾಡಿದೆಯಂತೆ. ಹಾಗು ಎರಡನೇ ಭಾಗದಲ್ಲಿ ಸಿದ್ದರಾಮಯ್ಯನವರ ಪಾತ್ರದಲ್ಲಿ ತಮಿಳಿನ ಹೆಸರಾಂತ ನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರಂತೆ. ಈ ಸಂಗತಿ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಇನ್ನೂ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಮಟ್ಟದ ಸಿದ್ದರಾಮಯ್ಯರ ಕುರಿತ ಬಯೋಪಿಕ್ ಲೀಡರ್ ರಾಮಯ್ಯ ಬಗ್ಗೆ ಚಿತ್ರತಂಡವೇ ಶೀಘ್ರದಲ್ಲಿ ಅಧಿಕೃತವಾಗಿ ಮಾಹಿತಿ ಕೊಡಲಿದ್ದು, ಅಲ್ಲಿ ತನಕ ಕಾಯಲೇಬೇಕು.