ನಾಡಹಬ್ಬ ದಸರಾದಲ್ಲಿ ತಾಯಿ ಚಾಮುಂಡೇಶ್ವರಿ ಅಂಬಾರಿಯಲ್ಲಿ ಮೆರವಣಿಗೆ ಹೊರಟಂತೆ, ನಮ್ಮ ಸ್ಟಾರ್ಸ್‍ಗಳು ದಸರಾ ಸಂಭ್ರಮದಲ್ಲಿ ಮುತ್ತಿನ ಪಲ್ಲಕ್ಕಿಯಲ್ಲಿ ಕುಳಿತು ಬೆಳ್ಳಿಭೂಮಿ ಅಂಗಳದಲ್ಲಿ ದಿಬ್ಬಣ ಹೊರಡ್ತಾರೆ. ಹೀಗಾಗಿ, ಈ ವರ್ಷ ಯಾವೆಲ್ಲಾ ತಾರೆಯರು ಚಿನ್ನದ ಥೇರಲ್ಲಿ ಕೂರಬಹುದು, ಯಾವೆಲ್ಲಾ ಸಿನಿಮಾಗಳ ಉತ್ಸವ ನಡೆಯಬಹುದು ಎನ್ನುವ ಲೆಕ್ಕಚ್ಚಾರ ಶುರುವಾಗಿದೆ. ಸಮಸ್ತ ಸಿನಿಮಾ ಪ್ರೇಮಿಗಳು ಹಬ್ಬದೂಟ ಸವಿಯೋದಕ್ಕೆ ಕುತೂಹಲಭರಿತರಾಗಿ ಕಾಯುವಂತಾಗಿದೆ. ಹಾಗಾದ್ರೆ, ಈ ಭಾರಿಯ ದಸರಾಗೆ ಮೆರಗು ತುಂಬುವ ಸ್ಟಾರ್ ನಟರು ಯಾರ್ಯಾರು? ಆ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಯಾವುದೇ ಹಬ್ಬ ಬರಲಿ ನಿರೀಕ್ಷಿತ ಸಿನೆಮಾಗಳ ಟ್ರೈಲರ್,ಟೀಸರ್,ಹಾಡು ಅಥವಾ ಚಿತ್ರಗಳನ್ನೇ ರಿಲೀಸ್ ಮಾಡುವ ಮೂಲಕ ಸಿನಿರಸಿಕರಿಗೆ ಹಬ್ಬದ ಸಂಭ್ರಮ ದುಪ್ಪಟ್ಟು ಮಾಡೋದು ಆಗಿನಿಂದಲೂ ನಡೆದುಕೊಂಡು ಬಂದ ವಾಡಿಕೆ. ಈ ಬಾರಿಯ ದಸರಾ ಹಬ್ಬ ಸಮೀಪಿಸುತ್ತಿದ್ದಂತೆ , ಬಿಗ್ ಬಜೆಟ್, ಸ್ಟಾರ್ ಸಿನೆಮಾಗಳ ಮೇಲೆ ಅನೇಕ ನಿರ್ಮಾಪಕರು ಕಣ್ಣಿಟ್ಟಿದ್ದಾರೆ. ಹೀಗಾಗಿ, ಸಿನಿಪ್ರಿಯರಿಗೆ ಭರ್ಜರಿ ರಸದೌತಣ ಸಿಗಲಿದೆ. ಕನ್ನಡ , ತೆಲುಗು ಹಾಗೂ ತಮಿಳಿನಲ್ಲಿ ದೊಡ್ಡ ಬಜೆಟ್ ಚಿತ್ರಗಳು ಬಿಡುಗಡೆ ಆಗುತ್ತಿವೆ.
ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ `ಘೋಸ್ಟ್’ ಸಿನಿಮಾ ಮೂಲಕ ಅಖಾಡಕ್ಕೆ ಇಳಿಯಲಿದ್ದಾರೆ. ದಸರಾ ಹಬ್ಬದಂದು ಬೆಳ್ಳಿಭೂಮಿಗೆ ಶ್ರೀಕಂಠನಿಂದ ನಯಾ ಕಳೆ ಬರೋದಂತೂ ಗ್ಯಾರಂಟಿ. ಯಾಕಂದ್ರೆ, ಘೋಸ್ಟ್ ಮೇಲಿನ ನಿರೀಕ್ಷೆ ಸಪ್ತಸಾಗರವನ್ನೂ ದಾಟಿದೆ. `ನೀವು ಗನ್‍ನಲ್ಲಿ ಎಷ್ಟು ಜನರನ್ನ ಎದುರಿಸಿದ್ದೀರೋ, ಅದಕ್ಕಿಂತ ಜಾಸ್ತಿ ಜನರನ್ನ ನಾನು ಕಣ್ಣಲ್ಲೇ ಎದುರಿಸಿದ್ದೀನಿ’ ಅದಕ್ಕೆ ಅವರು ನನ್ನನ್ನ ಒಜಿ ಅಂತಾರೇ. ಒಜಿ ಅಂದರೆ ಏನ್ಗೊತ್ತಾ ಒರಿಜಿನಲ್ ಗ್ಯಾಂಗ್‍ಸ್ಟಾರ್, ಹೀಗೊಂದು ಡೈಲಾಗ್ ಬಿಟ್ಟಿರೋ ಸೆಂಚುರಿ ಸ್ಟಾರ್ ಘೋಸ್ಟ್‍ಗಾಗಿ ಕಣ್ಣರಳಿಸಿ ಕಾಯುವಂತೆ ಮಾಡಿದ್ದಾರೆ. ಹೈವೋಲ್ಟೇಜ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಬೀರ್ ಬಲ್ ಚಿತ್ರ ಖ್ಯಾತಿಯ ಎಂ.ಜಿ ಶ್ರೀನಿವಾಸ್ ಡೈರೆಕ್ಟ್ ಮಾಡಿದ್ದಾರೆ. ಸಂದೇಶ್ ನಾಗರಾಜ್ ಅವ್ರು ಬಹುಕೋಟಿ ಬಂಡವಾಳ ಸುರಿದು ಈ ಚಿತ್ರ ನಿರ್ಮಿಸಿದ್ದಾರೆ.
ಇನ್ನು ಟಾಲಿವುಡ್ ನಲ್ಲಿ ವಂಶೀ ಕೃಷ್ಣ ನಿರ್ದೇಶನದ `ಟೈಗರ್ ನಾಗೇಶ್ವರ ರಾವ್’ ಆಕ್ಷನ್ ಥ್ರಿಲ್ಲರ್ ಸಿನಿಮಾದ ಮೇಲೂ ಸಾಕಷ್ಟು ನಿರೀಕ್ಷೆ ಇದೆ. ರವಿತೇಜ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರ, 70ರ ದಶಕದಲ್ಲಿ ಆಂಧ್ರದಲ್ಲಿ ವಾಸಿಸುತ್ತಿದ್ದ ಟೈಗರ್ ನಾಗೇಶ್ವರ್ ರಾವ್ ಹೆಸರಿನ ದರೋಡೆಕೋರನ ಕುರಿತು ತೆರೆಮೇಲೆ ಕಟ್ಟಿಕೊಡಲಾಗಿದೆ. ಅನುಪಮ್ ಖೇರ್, ಜಾನ್ ಅಬ್ರಹಂ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಜಿವಿ ಪ್ರಕಾಶ್ ಕುಮಾರ್ ಸಂಗೀತ ಸಂಯೋಜಿಸಿದ್ದು, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಅದ್ದೂರಿಯಾಗಿ ಮೂಡಿಬಂದಿದೆ
ದಳಪತಿ ವಿಜಯ್ ನಟಿಸುತ್ತಿರುವ ತಮಿಳಿನ ಬಹುನಿರೀಕ್ಷಿತ ‘ಲಿಯೋ’ ಸಿನೆಮಾ ಕೂಡ ದಸರಾ ಹಬ್ಬದ ಸಂದರ್ಭದಲ್ಲಿ ತೆರೆಗೆ ಅಪ್ಪಳಿಸುತ್ತಿದೆ. ಸುಮಾರು ೨೫೦-೩೦೦ ಕೋಟಿ ಅದ್ದೂರಿ ಬಜೆಟ್ ನಲ್ಲಿ ತಯಾರಾಗ್ತಿರೋ ಲಿಯೋ ಚಿತ್ರ ಜನವರಿ ತಿಂಗಳಲ್ಲಿ ಆರಂಭವಾಗಿತ್ತು. ಲೋಕೇಶ್ ಕನಗರಾಜ್ ನಿರ್ದೇಶನದ ಲಿಯೋ ಸಧ್ಯ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು, ಎಸ್ ಎಸ್ ಲಲಿತ್ ಕುಮಾರ್ ಜಗದೀಶ್ ಪಳನಿಸಾಮಿ ನಿರ್ಮಿಸಿದ್ದಾರೆ. ಚಿತ್ರ ರಿಲೀಸ್ ಗೆ ಆಕ್ಟೋಬರ್ ೨೩ ಫಿಕ್ಸ್ ಅಂತ ಹೇಳಲಾಗ್ತಿದ್ದು, ಲೋಕೇಶ್ ಕನಗರಾಜ್ ಯೂನಿವರ್ಸ್ ಕಾನ್ಸೆಪ್ಟ್ ನಲ್ಲಿ ಈ ಚಿತ್ರ ಮೂಡಿ ಬರುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ವಿಜಯ್, ತ್ರಿಷಾ, ಸಂಜಯ್ ದತ್, ಅರ್ಜುನ್ ಸೇರಿದಂತೆ ಘಟಾನುಘಟಿ ಸ್ಟಾರ್ ಗಳ ದಂಡೇ ಈ ಚಿತ್ರದಲ್ಲಿದೆ.
ನಂದಮೂರಿ ಬಾಲಕೃಷ್ಣ ಅವರ ನಟನೆಯ ಸಿನೆಮಾ ಅಂದ್ರೆ, ಭರ್ಜರಿ ಆ್ಯಕ್ಷನ್ ಇರೋದು ಪಕ್ಕಾ. ಹಾಗಾಗಿ ನಂದಮೂರಿ ಬಾಲಕೃಷ್ಣ ನಟನೆಯ ‘ಭಗವಂತ್ ಕೇಸರಿ’ ಚಿತ್ರದಲ್ಲೂ ಅದು ಮುಂದುವರಿಯಲಿದೆ ಅನ್ನೋ ಗ್ಯಾರಂಟಿಯೊಂದಿಗೆ ಚಿತ್ರದ ಮೇಲೂ ನಿರಿಕ್ಷೆ ಇದೆ. ಕಾಜಲ್ ಅಗರ್ವಾಲ್ ನಾಯಕಿಯಾಗಿ ನಟಿಸಿದ್ದು,ಸ್ಯಾಂಡಲ್ ವುಡ್ ಕಿಸ್ ಬ್ಯೂಟಿ ಶ್ರೀಲೀಲಾ ಅವರು ನಂದಮೂರಿ ಅವರ ತಂಗಿ ಪಾತ್ರ ಮಾಡಿದ್ದಾರೆ. ಶರತ್ಕುಮಾರ್ ಅವರು ಚಿತ್ರದಲ್ಲಿ ನಟಿಸಿದ್ದು, ಈ ಚಿತ್ರ ದಸರಾ ಹಬ್ಬಕ್ಕೆ ಒಂದೊಳ್ಳೆ ಉಡುಗೊರೆಯಾಗಲಿದ್ಯಾ ಕಾದು ನೋಡ್ಬೇಕಿದೆ.
ಇಷ್ಟು ಮಾತ್ರವಲ್ಲ,ಸ್ಯಾಂಡಲ್ ವುಡ್,ಟಾಲಿವುಡ್,ಕಾಲಿವುಡ್,ಮಾತ್ರವಲ್ಲದೇ ಮಾಲಿವುಡ್,ಬಾಲಿವುಡ್ ನಲ್ಲೂ ಇನ್ನಷ್ಟು ಸಿನೆಮಾಗಳು ರಿಲೀಸ್ ಆಗಲಿದ್ದು, ಆಕ್ಟೋಬರ್ ನ ದಸರಾ ವಿಶೇಷತೆಗೆ ಬಿಡುಗಡೆ ಗೊಳ್ಳೋ ಚಿತ್ರಗಳು ಇನ್ನಷ್ಟು ಮೆರಗು ನೀಡಬಹುದೇನೋ.