ನಟ ವಿಜಯ ರಾಘವೇಂದ್ರರ ಪತ್ನಿ ಸ್ಪಂದನ ಹಠಾತ್ ನಿಧನ ದೊಡ್ಮನೆಯನ್ನ ಮಾತ್ರವಲ್ಲ ಇಡೀ ಕರುನಾಡನ್ನು ಬೆಚ್ಚಿಬೀಳಿಸಿದೆ. ಸ್ನೇಹಿತೆಯರ ಜೊತೆ ಥಾಯ್‍ಲ್ಯಾಂಡ್‍ಗೆ ತೆರಳಿದ್ದ ಸ್ಪಂದನಾ, ಶಾಪಿಂಗ್ ಮುಗಿಸಿ ಹೋಟೆಲ್‍ಗೆ ವಾಪಾಸ್ ಬರುವ ವೇಳೆ ಕುಸಿದು ಬಿದ್ದು ಉಸಿರು ಚೆಲ್ಲಿದ್ದಾರೆ ಎನ್ನಲಾಗ್ತಿದೆ. ಸದ್ಯ ಸ್ಪಂದನಾ ಮೃತದೇಹವನ್ನ ವಿದೇಶದಿಂದ ಬೆಂಗಳೂರಿಗೆ ಕರೆತರುವ ವ್ಯವಸ್ಥೆ ಆಗ್ತಿದ್ದು ಮಂಗಳವಾರ ಬೆಳಗ್ಗೆ ಪಾರ್ಥೀವ ಶರೀರ ಬೆಂಗಳೂರು ತಲುಪಲಿದ್ದು ಅಂತಿಮ ದರ್ಶನಕ್ಕೆ ಇಡಲಾಗುವುದಾಗಿ ಕುಟುಂಬಸ್ಥರು ತಿಳಿಸಿದ್ದಾರೆ. ಅಂದ್ಹಾಗೇ, ಸ್ಪಂದನಾ ಅಗಲಿಕೆ ಕುಟುಂಬಸ್ಥರಿಗೆ ಮಾತ್ರವಲ್ಲ ಆಪ್ತರಿಗೂ ಅಘಾತ ತಂದೊಡ್ಡಿದ್ದು, ನಿರ್ದೇಶಕಿ ರೇಖಾರಾಣಿ ಕಶ್ಯಪ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಸ್ಪಂದನಾ ಬಗ್ಗೆ ಬರೆದುಕೊಂಡಿದ್ದಾರೆ. ತಮ್ಮ ಭಾವನೆಗಳನ್ನ ಬರಹ ರೂಪಕ್ಕೆ ಇಳಿಸಿದ್ದಾರೆ. ಅವರು ಏನ್ ಹೇಳಿದ್ದಾರೆ ನೀವೇ ನೋಡಿ
ಸ್ಪಂದನಾ! ನನ್ನ ಅಚ್ಚು! ಅವಳು ಹುಟ್ಟಿದಾಗಿನಿಂದ ಇದುವರೆಗೂ ನಾನವಳನ್ನು ಆ ಹೆಸರಿನಿಂದ ಕರೆದೇ ಇಲ್ಲ. ಕರೆದುದೆಲ್ಲಾ ಅಚ್ಚು ಎಂದೇ!.
ಸೌಮ್ಯ ಮುಖದ ಸುಂದರ ಹಠಮಾರಿ. ಆಸೆಪಟ್ಟಿದ್ದನ್ನು ನೆರವೇರಿಸಲು ಅಪ್ಪ ಅಮ್ಮ, ಅಣ್ಣ ತುದಿಗಾಲಲ್ಲಿ ನಿಂತಿರುತ್ತಿದ್ದರು. ನಂತರ ಬಂದ ಗಂಡ ವಿಜಯರಾಘವೇಂದ್ರನೋ! ದೇವಾ, ಅಳತೆ ಮಾಡಿಟ್ಟ ಹಾಗೆ ಸಿಕ್ಕ ಅಮೂಲ್ಯ ವಜ್ರ. ಆತನ ಪ್ರಪಂಚದಲ್ಲಿ ಮೊದಲು ಪ್ರೀತಿಯ ಪತ್ನಿಗೆ ಸ್ಥಾನ. ನಂತರ ಮಿಕ್ಕೆಲ್ಲ. ಬಹಳ ಮುಗ್ದೆಯಾಗಿದ್ದ ನನ್ನ ಅಚ್ಚುವನ್ನು ಒಮ್ಮೆ ಸದಾಶಿವನಗರ ಪಾರ್ಕ್ ಬಳಿ ಹರೆಯದ ಹುಡುಗನೊಬ್ಬನ ಜೊತೆ ಕಾರಿನಲ್ಲಿ ಕುಳಿತು ಹರಟೆಹೊಡೆಯುತ್ತಿದ್ದುದ್ದನ್ನು ಕಂಡು ಜೀವ ಬಾಯಿಗೆ ಬಂದಿತ್ತು. ಅವಳಪ್ಪ ಬಿ.ಕೆ. ಶಿವರಾಂ ಮೊದಲೇ ಹುಲಿ. ‘ ನಿನ್ನ ಪ್ರಾಣಪಕ್ಷಿ ಎಲ್ಲಿಟ್ಟಿದ್ದೀಯ ಹೇಳು’ ಎಂದು ರೇಗಿಸಿದಾಗಲೆಲ್ಲಾ ಮಗಳನ್ನು ಮುದ್ದುಮಾಡುತ್ತಾ ‘ ಅಚ್ಚು ಒಳಗಿದೆ ನನ್ನ ಪ್ರಾಣಪಕ್ಷಿ’ ಎನ್ನುತ್ತಿದ್ದ. ಅಪ್ಪನ ಅಪಾರ ಪ್ರೀತಿ ಅವಳ ಕಾನ್ಫಿಡೆನ್ಸ್ ಲೆವೆಲ್‍ನ ಸದಾ ಉತ್ತುಂಗದಲ್ಲಿಟ್ಟಿತ್ತು. ಇಂತಹ ಅಪ್ಪನ ಬಳಿ ಮಗಳ ಹಿತರಕ್ಷಣೆಯ ದೃಷ್ಟಿಯಿಂದ ಚಾಡಿ ಹೇಳಲೋ? ಬೇಡವೊ? ಎಂದು ಬಹಳ ದಿನ ಒದ್ದಾಡಿದ್ದೆ. ನಂತರ ಕರೆಮಾಡಿ ನಿನ್ನ ಜೊತೆ ಕಾರಿನಲ್ಲಿದ್ದ ಹುಡುಗನ ವಿವರ ಕೊಡು ಎಂದೆ. ‘ ಆಂಟಿ, ನಾನು ಮದುವೆಯಾದರೆ ಅವರನ್ನೇ…ಅಪ್ಪನನ್ನು ಒಪ್ಪಿಸಿ’ ಎಂದಳು. ಎಷ್ಟು ಹಠಮಾಡಿದರೂ ಹುಡುಗ ಯಾರೆಂದು ಹೇಳುತ್ತಿಲ್ಲ. ಕಡೆಗೆ ‘ ಆಂಟಿ, ಸಿನೆಮಾದವನು ಅಂದರೆ ನೀವೆಲ್ಲಾ ಬೇಡ ಅನ್ನುತ್ತೀರಿ. ಅದಕ್ಕೆ ಅವರ ಹೆಸರು ಹೇಳೊಲ್ಲ’ ಎಂದಳು. ಹಾಗಾದರೆ ನಾನೂ ನಿನ್ನ ಪ್ರೀತಿಗೆ ಸಪೋರ್ಟ್ ಮಾಡೊಲ್ಲ ಎಂದೆ.ಅಚ್ಚು ಮೇಲೆ ಕಣ್ಗಾವಲು ಹಾಕಿದರೂ ನನ್ನ ಕೈಗೆ ಎಲ್ಲೂ ಸಿಕ್ಕಿಹಾಕಿಕೊಳ್ಳದ ಜಾಣತನ ತೋರುವಷ್ಟು ದೊಡ್ಡವಳಾಗಿಬಿಟ್ಟಿದ್ದಳು. ಬಹಳ ಗಲಾಟೆ ಮಾಡಿದ ನಂತರ ಸಣ್ಣ ಧ್ವನಿಯಲ್ಲಿ ಹೇಳಿದಳು ಚಿನ್ನಾರಿ ಮುತ್ತ!
ಈ ಮಧ್ಯೆ ನನ್ನ ಆಪ್ತ ಹಾಗೂ ನನ್ನ ಸೋಲ್‍ಮೇಟ್ ಶಿವರಾಂಗೆ ಅಚ್ಚು ವಿಷಯ ಹೇಳಲೇಬೇಕೆಂದು ನಿರ್ಧರಿಸಿದ್ದರೂ, ಷೂಟಿಂಗ್ ನಲ್ಲಿ ಬಿಜಿಯಾದೆ. ಬೆಳಿಗೆ ಬೆಳಿಗ್ಗೆ ಶಿವರಾಂ ಕರೆ. ‘ ನಿನ್ನ ಮಗಳು ಅಚ್ಚುಗೆ ಮದುವೆ ಮಾಡ್ತಿದ್ದೀನಿ ಅಂತ! ಮತ್ತೆ ನನ್ನ ಜೀವ ಬಾಯಿಗೆ ಬಂತು. ಹು..ಡು…ಗ..ಯಾರು? ಎಂದೆ ನಡುಗುವ ಧ್ವನಿಯಲ್ಲಿ. ಯಾವುದೇ ಕಾರಣಕ್ಕೂ ಅಚ್ಚು ಕನಸು ಛಿದ್ರವಾಗುವುದು ನನಗಿಷ್ಟವಾಗಿರಲಿಲ್ಲ. ಏಕೆಂದರೆ ನಮ್ಮ ಪಾಲಿಗೆ ಅವಳು ಸ್ವರ್ಗದಿಂದ ನೇರವಾಗಿ ನಮ್ಮ ಕೈಗೆ ಸಿಕ್ಕ ಹೂವು. ನಿಧಾನವಾಗಿ, ಸಮಾಧಾನಕರವಾದ ಧ್ವನಿಯಲ್ಲಿ ಶಿವರಾಂ ಹೇಳಿದ್ದು ‘ ಅಚ್ಚನೇ ಆರಿಸಿಕೊಂಡಿದ್ದಾಳೆ. ವಿಜಯರಾಘವೇಂದ್ರ. ಒಳ್ಳೆ ಹುಡುಗನನ್ನೇ ಆರಿಸಿಕೊಂಡಿದ್ದಾಳಲ್ವಾ?’
ಶಿವರಾಂ ಮಾತು ಕೇಳುತ್ತಿದ್ದಂತೆ ನೂರಾರು ಬಂಡೆಗಳು ತಲೆಯಿಂದ ಕೆಳಗೆ ಇಳಿದ ಸುಂದರ ಅನುಭವ. ಇಲ್ಲಿ ವಿಜಯರಾಘವೇಂದ್ರ ಪುಣ್ಯ ಮಾಡಿದ್ದನೋ…ಅಚ್ಚು ಪುಣ್ಯಮಾಡಿದ್ದಳೋ ಗೊತ್ತಿಲ್ಲ ಅವರ ದಾಂಪತ್ಯಜೀವನ ಸ್ವರ್ಗದ ಗೋಡೆಗಳಿಂದ ರಚನೆಯಾಗಿತ್ತು.
ನಾನವಳನ್ನು ಆಗಾಗ್ಗೆ ಚಿನ್ನಾರಿ ಮುತ್ತಿ ಎಂದರೆ ಅಲ್ಲ, ನಾನು ಅಚ್ಚು ಎನ್ನುತ್ತಿದ್ದಳು.
ಅಚ್ಚು ಚಿಕ್ಕವಳಿದ್ದಾಗ ಅವಳ ಮಾವನ ಮನೆ ಬೆಳ್ತಂಗಡಿಯಲ್ಲಿ ಷೂಟಿಂಗ್ ಮಾಡುತ್ತಿದೆ. ಹಗಲು ರಾತ್ರಿ ನಡೆಯುತ್ತಿದ್ದ ಧಾರಾವಾಹಿ. ಪುಟ್ಟಿ ನನ್ನ ಹೆಗಲಿಗಂಟಿಕೊಂಡು ಹಗಲೂ ರಾತ್ರಿ ಬೇಸರವಿಲ್ಲದೆ ಆಸಕ್ತಿಯಿಂದ ಷೂಟಿಂಗ್ ನೋಡುತ್ತಿದ್ದಳು. ಒಮ್ಮೆ ಧಾರಾವಾಹಿಗೆ ಸಂಭಾಷಣೆ ಬರೆಯುತ್ತಾ ಕುಳಿತಿದ್ದೆ. ಮುಖ ಊದಿಸಿಕೊಂಡು ಹತ್ತಿರ ಬಂದು ‘ಸೌಮ್ಯವಾದ ಕೋಪದಿಂದ’ ‘ ಆಂಟಿ ನಾನು ಅವತ್ತಿಂದ ನೋಡ್ತಿದ್ದೀನಿ. ಧಾರಾವಾಹಿಯಲ್ಲಿ ನನ್ನ ಹೆಸರು ಯಾಕೆ ಇನ್ನೂ ಬಂದಿಲ್ಲ?’ ಎಂದು ಕೇಳಿದಳು. ನನಗರ್ಥವಾಯ್ತು, ತನ್ನ ಪ್ರೀತಿಪಾತ್ರ ಆಂಟಿ ತನ್ನ ಹೆಸರಲ್ಲದೆ ಬೇರೆ ಹೆಸರುಗಳನ್ನು ಪಾತ್ರಗಳಿಗೆ ಇಡಲು ಸಾಧ್ಯವೆ? ಪಟ್ಟನೆ ನಾನು ಎಚ್ಚೆತ್ತು ಹೇಳಿದೆ ‘ ಅಚ್ಚು ಮುಂದಿನ ಸೀರಿಯಲ್ ನಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇರುತ್ತೆ ನೋಡು. ಪ್ರಾಮಿಸ್? ಎಂದಳು ಪ್ರಾಮಿಸ್ ಎಂದೆ. ಅದರಂತೆ ನನ್ನ ಮುಂದಿನ ಮಕ್ಕಳ ಧಾರಾವಾಹಿ ಜಿಂ ಜಿಂ ಜಿಂಬಾದಲ್ಲಿ ಮುಖ್ಯಪಾತ್ರಧಾರಿಯ ಹೆಸರು ಅಚ್ಚು ಅಂತಾನೇ ಇಟ್ಟೆಮತ್ತೆ ಅವಕಾಶ ಸಿಕ್ಕಾಗಲೆಲ್ಲಾ ಅಚ್ಚುಗಳು ನನ್ನ ಎಲ್ಲಾ ಸೀರಿಯಲ್ ಗಳಲ್ಲೂ ಓಡಾಡಿಬಿಟ್ಟರು.
ಅಚ್ಚು..ಈ ಭೂಮಿಗೆ ಬರಲು ಒಳ್ಳೆಯ ಅಪ್ಪ, ಅಮ್ಮಂದಿರ ಆಯ್ಕೆ ಸರಿಯಾಗಿತ್ತು. ಅಣ್ಣನ ಆಯ್ಕೆ ಅದೃಷ್ಟದಿಂದ ಕೂಡಿತ್ತು, ಗಂಡನ ಆಯ್ಕೆಗೆ ಸ್ವರ್ಗದಿಂದ ದೇವತೆಗಳೆಲ್ಲಾ ಬಂದು ಹರಸಿದರು. ಮಗನ ಆಯ್ಕೆಯೂ ಸ್ವರ್ಗದಿಂದ ಬಂದ ಮುದ್ದಾದ ದೇವರಾಗಿತ್ತು. ಇಲ್ಲೇ ಸ್ವರ್ಗ ಸೃಷ್ಟಿಸಿದ್ದ ನೀನು, ಇಷ್ಟುಬೇಗ ನಿನ್ನ ತವರುಮನೆ oಟಿeತಿಚಿಥಿ ಆ ಸ್ವರ್ಗಕ್ಕೆ ಹೋಗುವ ಆತುರವೇನಿತ್ತು? ಮರಳಿಬಾರದ ಲೋಕಕ್ಕೆ ಹೋಗಿಬಿಟ್ಟಿದ್ದೀಯ…
ಅಲ್ಲೂ ಹೀಗೆ ಸುಖವಾಗಿರು ಕಂದಾ.
https://www.facebook.com/Rekharani?mibextid=D4KYlr