ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅಭಿನಯದ ಬಹುನಿರೀಕ್ಷಿತ ‘ವೂಲ್ಫ್’ (WOLF) ಚಿತ್ರದ ಟೀಸರ್ ರಿಲೀಸ್ ಆಗಿದೆ. ವಿನೂ ವೆಂಕಟೇಶ್ ನಿರ್ದೇಶನದ ಈ ಚಿತ್ರದಲ್ಲಿ ಲಕ್ಷ್ಮಿ ರೈ, ವಸಿಷ್ಟ ಎನ್. ಸಿಂಹ ಮತ್ತು ಅನಸೂಯಾ ಭಾರದ್ವಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಇದು ಪ್ರಭುದೇವ ಅವರ 60 ನೇ ಚಿತ್ರವಾಗಿದ್ದು, ಪ್ಯಾನ್-ಇಂಡಿಯಾ ತುಂಬೆಲ್ಲಾ ಬಿಡುಗಡೆಯಾಗಲು ಸಜ್ಜಾಗ್ತಿದೆ.
ಬಿಡುಗಡೆಯಾಗಿರುವ ಒಂದು ನಿಮಿಷ ಅವಧಿಯ ಟೀಸರ್ ನಲ್ಲಿ ಪ್ರಭುದೇವ ಎಲ್ಲೋ ಬಂಧಿಯಾಗಿರುವ, ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವಂತೆ ಭಾಸವಾಗುತ್ತದೆ. ಕಥಾವಸ್ತುವಿನ ಬಗ್ಗೆ ಟೀಸರ್ ಹೆಚ್ಚಿನದನ್ನು ಬಹಿರಂಗಪಡಿಸುವುದಿಲ್ಲ. ಇದು ಹಾರರ್ ಸಿನಿಮಾ ಇರಬಹುದಾ ಎಂದು ಅನಿಸಿದರೂ, ಸಂಪೂರ್ಣ ಹಾರರ್ ಅಲ್ಲ, ಬೇರೆಯದೇ ರೀತಿಯ ಕಥೆ ಇದಾಗಿದೆ ಎನ್ನುತ್ತಾರೆ ನಿರ್ದೇಶಕ ವಿನು ವೆಂಕಟೇಶ್. ನಮ್ಮ ಪ್ರೇಕ್ಷಕರು ಈಗಾಗಲೇ ಎಲ್ಲಾ ರೀತಿಯ ಸಿನಿಮಾಗಳನ್ನು ನೋಡಿದ್ದಾರೆ. ಇದು ಹಾಗಲ್ಲ, ಸಂಪೂರ್ಣ ಭಿನ್ನವಾಗಿದೆ. ಹೊಸ ಕಥೆ, ಹೊಸ ಲುಕ್, ಹೊಸ ರೀತಿಯ ಮೇಕಿಂಗ್ ಎಲ್ಲವನ್ನೂ ಒಳಗೊಂಡಿದೆ ಎನ್ನುತ್ತಾರೆ.
ಬಹುಕೋಟಿ ವೆಚ್ಚದಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಿರುವ ಈ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ವಿನು ವೆಂಕಟೇಶ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದರು.
‘ವೂಲ್ಫ್’ ನಲ್ಲಿ ಕುಂದಾನಗರಿ ಕುವರಿ ಲಕ್ಷ್ಮೀ ರೈ ಸ್ಕ್ರೀನ್ ಶೇರ್ ಮಾಡಿದ್ದಾರೆ. ಅವರ ಪಾತ್ರಕ್ಕೆ ಗ್ಲಾಮರಸ್ ಟಚ್ ಇದೆ. ಪ್ರಭುದೇವ ಅವರ ಈ ಒಂದು 60 ನೇ ಸಿನಿಮಾವನ್ನ ಕನ್ನಡಿಗರೇ ನಿರ್ಮಿಸಿದ್ದಾರೆ. ‘ಘೋಸ್ಟ್’ ಸಿನಿಮಾ ಮಾಡಿರೋ ಸಂದೇಶ್ ನಾಗರಾಜ್ ಅವರೇ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಇಡೀ ಸಿನಿಮಾದ ಶೂಟಿಂಗ್ ಮೈಸೂರಿನಲ್ಲಿಯೇ ನಡೆದಿದೆ. ಅದೆಲ್ಲ ಸರೀ, ಈ ಟೈಟಲ್ ವಿಚಿತ್ರವಾಗಿದೆಯಲ್ಲ, ಏನಿದು ವೂಲ್ಫ್ ಅಂತೀರಾ? ತಿಳಿದುಕೊಳ್ಳಲು ಸಿನಿಮಾವನ್ನೇ ನೋಡಬೇಕು!