ಒಂದು ಸಿನಿಮಾದಲ್ಲಿ ಒಬ್ಬ ಹೀರೋಗೆ ಒಂದು ಅಥವಾ ಎರಡು, ತುಂಬ ಹೆಚ್ಚು ಅಂದ್ರೆ ಮೂವರು ಹೀರೋಯಿನ್ಸ್ ಇರೋದನ್ನು ನೀವು ನೋಡಿರುತ್ತೀರಿ. ಆದರೆ ಇಲ್ಲೊಂದು ಸಿನಿಮಾದಲ್ಲಿ ಒಬ್ಬ ಹೀರೋಗೆ ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೆರಡು ಜನ ಹೀರೋಯಿನ್ಸ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಅಂದಹಾಗೆ, ಆ ಸಿನಿಮಾದ ಹೆಸರು ‘ಡ್ಯೂಡ್’.
ಈ ಹಿಂದೆ ‘ರಿವೈಂಡ್’, ‘ರಾಮಾಚಾರಿ 2.0’ ಮೊದಲಾದ ಸಿನಿಮಾಗಳನ್ನು ನಿರ್ದೇಶಿಸಿ ಜೊತೆಗೆ ನಾಯಕನಾಗಿ ನಟಿಸಿದ್ದ ತೇಜ್ ‘ಡ್ಯೂಡ್’ ಸಿನಿಮಾದಲ್ಲಿ ನಾಯಕನಾಗಿ ನಟಿಸಿಸುತ್ತಿದ್ದು, ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ 12 ಜನ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗಷ್ಟೇ ‘ಡ್ಯೂಡ್’ ಸಿನಿಮಾ ಮುಹೂರ್ತವನ್ನು ಆಚರಿಕೊಂಡಿತು.
ಪೂಜಾ ರಾಜು, ಚಿತ್ರಲ್ ರಂಗಸ್ವಾಮಿ, ರೋಹಿಣಿ, ಪ್ರಾಣವಿ ಗೌಡ, ಸಹನಾ ಗೌಡ, ಸಾನ್ಯಾ ಕಾವೇರಮ್ಮ, ಜೀವತಾ, ತನುಜಾ ತಿತೀರಾ, ಸೌಮ್ಯ, ಕ್ರಿಸ್ಟಿಯಾನಾ ರೊಸ್ಲಿನ್ ಜಾರ್ಚ್, ಮಿಶೇಲ್ ನೊರೋನಾ, ಜೀವಿತಾ ವಸಿಷ್ಠ ಹೀಗೆ 12 ಜನ ಈ ಸಿನಿಮಾದಲ್ಲಿ ನಾಯಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ರಾಘವೇಂದ್ರ ರಾಜಕುಮಾರ್, ರಂಗಾಯಣ ರಘು, ಸ್ಪರ್ಶ ರೇಖಾ, ವಿಜಯ ಚೆಂಡೂರ್, ಸಂದೀಪ್ ಮಲಾನಿ ಹೀಗೆ ದೊಡ್ಡ ಕಲಾವಿದರ ತಾರಾಬಳಗ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿದೆ.
‘ಡ್ಯೂಡ್’ ಸಿನಿಮಾದ ಮುಹೂರ್ತದ ಬಳಿಕ ಮಾತನಾಡಿದ ನಾಯಕ ನಟ ಕಂ ನಿರ್ದೇಶಕ ತೇಜ್, ‘ಇದೊಂದು ಹೀರೋ ಅಥವಾ ಹೀರೋಯಿನ್ ಇರುವ ಸಿನಿಮಾ ಎನ್ನುವುದಕ್ಕಿಂತ ಕಂಟೆಂಟ್ ಆಧಾರಿತ ಸಿನಿಮಾ ಎನ್ನುಬಹುದು. ಈ ಸಿನಿಮಾದಲ್ಲಿ ಮಹಿಳಾ ಫುಟ್ಬಾಲ್ ತಂಡದ ಕಥೆಯಿದೆ. ಹಾಗಾಗಿ ಕಥೆಗೆ ತಕ್ಕಂತೆ ಸಿನಿಮಾದಲ್ಲಿ 12 ಜನ ನಾಯಕಿಯರಿದ್ದಾರೆ. ಪ್ರತಿ ಪಾತ್ರಕ್ಕೂ ಅದರದ್ದೇಯಾದ ಹಿನ್ನಲೆ ಮಹತ್ವವಿದೆ. ಹಾಗಾಗಿ ಸಾಕಷ್ಟು ಸಮಯ ತೆಗೆದುಕೊಂಡು, 12 ಜನ ಹೀರೋಯಿನ್ಸ್ ಆಯ್ಕೆ ಮಾಡಿಕೊಂಡಿದ್ದೇವೆ. ಇಲ್ಲಿ ಲವ್, ಎಮೋಶನ್ಸ್, ಥ್ರಿಲ್ಲಿಂಗ್ ಎಲ್ಲ ಥರದ ಎಲಿಮೆಂಟ್ಸ್ ಇದೆ’ ಎಂದು ಸಿನಿಮಾದ ಕಥೆ ಮತ್ತು ನಾಯಕಿಯರ ಬಗ್ಗೆ ವಿವರಣೆ ನೀಡಿದರು.
‘ಕನ್ನಡದಲ್ಲಿ ಈ ಥರದ ಕ್ರೀಡಾಧಾರಿತ ಸಿನಿಮಾ ಇಲ್ಲಿಯವರೆಗೆ ಬಂದಿಲ್ಲ. ‘ಡ್ಯೂಡ್’ ಅಂದ್ರೆ ಜೀವನದಲ್ಲಿ ಸೋತು ಗೆಲ್ಲುವವನು. ಈ ಸಿನಿಮಾಕ್ಕೆ ಹಲವು ಆಯಾಮವಿದೆ. ಫುಟ್ಬಾಲ್ ಒಂದು ಎಮೋಶನ್ಸ್ ಆಗಿ ಎಲ್ಲ ಪಾತ್ರಗಳನ್ನು ಜೋಡಿಸುತ್ತದೆ. ಜೀವನದಲ್ಲಿ ಸೋತು ಮೇಲೇಳುವವನೇ ನಿಜವಾದ’ಡ್ಯೂಡ್’. ಹಾಗಾಗಿ ಸಿನಿಮಾಕ್ಕೆ ‘ಡ್ಯೂಡ್’ ಅಂಥ ಟೈಟಲ್ ಇಡಲಾಗಿದೆ’ ಎಂಬುದು ನಿರ್ದೇಶಕ ತೇಜ್ ಮಾತು.
‘ಪನಾರೊಮಿಕ್ ಸ್ಟುಡಿಯೋಸ್’ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ‘ಡ್ಯೂಡ್’ ಸಿನಿಮಾದ ಹಾಡುಗಳಿಗೆ ಎಮಿಲ್ ಮೊಹಮ್ಮದ್ ಸಂಗೀತ ಸಂಯೋಜಿಸುತ್ತಿದ್ದಾರೆ. ಮನೋಜ್ ದೊಡ್ಡಮನಿ ಸಾಹಿತ್ಯವಿದೆ. ಚಿತ್ರಕ್ಕೆ ಪ್ರೇಮ್ ಛಾಯಾಗ್ರಹಣ, ಆ್ಯನಿಸನ್ ಸಂಕಲನವಿದೆ. ‘ಡ್ಯೂಡ್’ ಸಿನಿಮಾದ ಮುಹೂರ್ತದ ವೇಳೆ ಹಾಜರಿದ್ದ ಚಿತ್ರದ ಪ್ರಮುಖ ಕಲಾವಿದರು ಮತ್ತು ತಂತ್ರಜ್ಞರು ಸಿನಿಮಾದ ಬಗ್ಗೆ ಮಾತನಾಡಿದರು. ಸದ್ಯ ‘ಡ್ಯೂಡ್’ ಸಿನಿಮಾದ ಮುಹೂರ್ತ ಆಚರಿಸಿಕೊಂಡಿರುವ ಚಿತ್ರತಂಡ, ಕಲಾವಿದರಿಗೆ ಫುಟ್ಬಾಲ್ ತರಬೇತಿ ನೀಡುತ್ತಿದ್ದು ಇದೇ ನವೆಂಬರ್ ಅಥವಾ ಡಿಸೆಂಬರ್ ವೇಳೆಗೆ ಸಿನಿಮಾ ಶೂಟಿಂಗ್ ಶುರು ಮಾಡುವ ಯೋಜನೆಯಲ್ಲಿದೆ.