ಕ್ರೇಜಿಸ್ಟಾರ್ ರವಿಚಂದ್ರನ್, ದಿಗಂತ್ ಮಂಚಾಲೆ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ‘ದಿ ಜಡ್ಜ್ ಮೆಂಟ್’ ಸಿನಿಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ಇತ್ತೀಚೆಗೆ ಸಿನಿಮಾದಲ್ಲಿ ಬರುವ ಪಾರ್ಟಿ ಸಾಂಗ್ ಒಂದನ್ನು ಬೆಂಗಳೂರಿನ ಪ್ರತಿಷ್ಠಿತ ‘ಡೆಕ್ ಆಫ್ ಬ್ರೆವ್ಯುಸ್’ ಪಬ್ ನಲ್ಲಿ ಅದ್ಧೂರಿಯಾಗಿ ಚಿತ್ರಿಸಿಕರಿಸಲಾಯಿತು. ಗೀತ ಸಾಹಿತಿ ಪ್ರಮೋದ ಮರವಂತೆ ರಚಿಸಿರುವ, ಅನೂಪ್ ಸೀಳಿನ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ದಿಗಂತ್ ಮತ್ತು ಧನ್ಯಾ ರಾಮಕುಮಾರ್ ಜೋಡಿಯಾಗಿ ಹೆಜ್ಜೆ ಹಾಕಿದರು. ಇವರೊಂದಿಗೆ ಹಾಡಿನಲ್ಲಿ ಕಲಾವಿದರಾದ ಅಶ್ವಿನ್, ಸುಶೀಲ್ ನಾಗ್ ಮತ್ತು ಸುವೀಷ್ ಕೂಡ ಕಾಣಿಸಿಕೊಂಡಿದ್ದು, ಸುಮಾರು 75 ಜನ ನೃತ್ಯ ಕಲಾವಿದರು ಮತ್ತು 50ಕ್ಕೂ ಹೆಚ್ಚು ಸಹ ಕಲಾವಿದರನ್ನು ಬಳಸಿಕೊಂಡು ಈ ಹಾಡನ್ನು ಚಿತ್ರೀಕರಿಸಲಾಯಿತು.
ಇನ್ನು ‘ದಿ ಜಡ್ಜ್ ಮೆಂಟ್’ ಸಿನಿಮಾದ ಈ ಹಾಡಿನ ಬಗ್ಗೆ ಮಾತನಾಡುವ ನಿರ್ದೇಶಕ ಗುರುರಾಜ ಕುಲಕರ್ಣಿ (ನಾಡಗೌಡ), ‘ಇಂದಿನ ಯುವಜನತೆಯ ಮಧ್ಯೆ ಟ್ರೆಂಡ್ ಆಗುವ ಪಬ್ ಸಾಂಗ್ ಇದಾಗಲಿದೆ. ಈ ಹಾಡು ವರ್ಷದ ಸೂಪರ್ ಹಿಟ್ ಹಾಡು ಆಗಲಿದೆ ಎಂಬ ವಿಶ್ವಾಸವಿದೆ. ಹೊಸತನದ ಬೀಟ್ಸ್ ಇರುವ ಈ ಹಾಡಿಗಾಗಿ, ಬಾಲಿವುಡ್ ನಿಂದ ಊರ್ವಶಿ ಮತ್ತು ಗೋವಾದಿಂದ ಸಾನಿಯಾರನ್ನು ವಿಶೇಷವಾಗಿ ಆಹ್ವಾನಿಸಲಾಗಿದೆ. ಯುವ ನಿರ್ದೇಶಕ ರಾಮ್ ಕಿರಣ್ ಮತ್ತು ತಂಡ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದೆ’ ಎಂದು ಮಾಹಿತಿ ನೀಡಿದ್ದಾರೆ.
‘ದಿ ಜಡ್ಜ್ ಮೆಂಟ್’ ಸಿನಿಮಾದಲ್ಲಿ ರವಿಚಂದ್ರನ್, ದಿಗಂತ್, ಧನ್ಯಾ ರಾಮಕುಮಾರ್ ಅವರೊಂದಿಗೆ ಮೇಘನಾ ಗಾಂವ್ಕರ್, ಲಕ್ಷ್ಮೀ ಗೋಪಾಲಸ್ವಾಮಿ, ಟಿ. ಎಸ್ ನಾಗಾಭರಣ, ಪ್ರಕಾಶ ಬೆಳವಾಡಿ, ಕೃಷ್ಣ ಹೆಬ್ಬಾಳೆ, ರಂಗಾಯಣ ರಘು, ರಾಜೇಂದ್ರ ಕಾರಂತ್, ಸುಜಯ್ ಶಾಸ್ತ್ರೀ, ರೂಪಾ ರಾಯಪ್ಪ, ರವಿಶಂಕರ ಗೌಡ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ದ ಜಡ್ಜ್ ಮೆಂಟ್’ ಲೀಗಲ್ ಥ್ರಿಲ್ಲರ್ ಶೈಲಿಯ ಸಿನಿಮಾವಾಗಿದ್ದು, ಇಂದಿನ ಪ್ರಸ್ತುತ ವಿದ್ಯಮಾನಗಳನ್ನು, ಘಟನೆಗಳನ್ನು ಆಧಾರವಾಗಿ ಇಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಸಿನೆಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುವುದು ಗ್ಯಾರೆಂಟಿ ಎಂಬ ವಿಶ್ವಾಸ ಚಿತ್ರತಂಡದ್ದು.