ಇತ್ತೀಚೆಗಷ್ಟೇ ‘ಜೊತೆ ಜೊತೆಯಲಿ…’ ಧಾರಾವಾಹಿ ಮುಗಿಸಿ ಹೊರಬಂದಿರುವ ನಟಿ ಮೇಘಾ ಶೆಟ್ಟಿ, ಈಗ ಪೂರ್ಣ ಪ್ರಮಾಣದಲ್ಲಿ ಹಿರಿತೆರೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಸದ್ಯ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿರುವ ಮೇಘಾ ಶೆಟ್ಟಿ, ಈಗ ‘ಆಪರೇಶನ್ ಲಂಡನ್ ಕೆಫೆ’ ಎಂಬ ಔಟ್ ಆ್ಯಂಡ್ ಔಟ್ ಆ್ಯಕ್ಷನ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದಲ್ಲಿ ಮೇಘಾ ಶೆಟ್ಟಿ ತಮ್ಮ ಪಾತ್ರದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದ್ದು, ಸಿನಿಮಾದ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.
ಕನ್ನಡ ಜೊತೆಗೆ ಮರಾಠಿ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗುತ್ತಿರುವ ‘ಆಪರೇಶನ್ ಲಂಡನ್ ಕೆಫೆ’ ಸಿನಿಮಾದಲ್ಲಿ ಮೇಘಾ ಶೆಟ್ಟಿ ಅವರಿಗೆ ಕವೀಶ್ ಶೆಟ್ಟಿ ನಾಯಕನಾಗಿ ಜೋಡಿಯಾಗುತ್ತಿದ್ದಾರೆ. ಮೇಘಾ ಶೆಟ್ಟಿ, ಕವೀಶ್ ಶೆಟ್ಟಿ ಅವರೊಂದಿಗೆ ಮರಾಠಿಯ ಹೆಸರಾಂತ ಕಲಾವಿದರಾದ ಶಿವಾನಿ ಸುರ್ವೆ, ವಿರಾಟ್ ಮಡಕೆ, ಅರ್ಜುನ್ ಕಾಪಿಕ್ಕಾಡ್, ಬಿ. ಸುರೇಶ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
‘ಇಂಡಿಯನ್ ಫಿಲಂ ಫ್ಯಾಕ್ಟರಿ’ ಮತ್ತು ‘ದೀಪಕ್ ರಾಣೆ ಫಿಲಂಸ್’ ಲಾಂಛನದಡಿಯಲ್ಲಿ ವಿಜಯ್ ಕುಮಾರ್ ಶೆಟ್ಟಿ ಹವರಾಲ್ ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಅದ್ದೂರಿಯಾಗಿ ನಿರ್ಮಿಸುತ್ತಿರುವ ಈ ಚಿತ್ರವನ್ನು ಸಡಗರ ರಾಘವೇಂದ್ರ ನಿರ್ದೇಶಿಸುತ್ತಿದ್ದಾರೆ. ಸಿನಿಮಾಕ್ಕೆೆ ಡಿ. ನಾಗಾರ್ಜುನ್ ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಪ್ರಾನ್ಷು ಝಾ ಸಂಗೀತ ಸಂಯೋಜಿಸುತ್ತಿದ್ದಾರೆ. ಕವಿರಾಜ್, ವಿ. ನಾಗೇಂದ್ರ ಪ್ರಸಾದ್, ಕ್ಷಿತಿಜ್ ಪಟವರ್ಧನ್ ಮೊದಲಾದವರು ಗೀತೆಗಳಿಗೆ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ‘ಆಪರೇಶನ್ ಲಂಡನ್ ಕೆಫೆ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿದ್ದು, ಇದೇ ವರ್ಷಾಂತ್ಯದಲ್ಲಿ ತಮ್ಮ ಹೊಸ ಸಿನಿಮಾ ತೆರೆಗೆ ಬರಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಮೇಘಾ ಶೆಟ್ಟಿ.