ಯುವನಟ ಅಥರ್ವ್ ನಾಯಕರಾಗಿ ನಟಿಸಿರುವ ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಟೀಸರ್ ಗೆ ಸುದೀಪ್ ಧ್ವನಿ ನೀಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಈ ಹಿಂದೆ ‘ಗೆಜ್ಜೆನಾದ’, ‘ನಂದ ಲವ್ಸ್ ನಂದಿತಾ’, ‘ಕನ್ನಡದ ಕಂದ’, ‘ಆಟ’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನಿರ್ದೇಶಿಸಿದ್ದ ಹಿರಿಯ ನಿರ್ದೇಶಕ ಬಿ. ಎನ್ ವಿಜಯ್ ಕುಮಾರ್ (ಗೆಜ್ಜೆನಾದ) ಪುತ್ರ ಅಥರ್ವ ಈ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ.
ಇದು ಮಹಾನಗರವೊಂದರಲ್ಲಿ ನಡೆಯುವ ಕಥೆಯಾಗಿದೆ. ಹೆಣ್ಣು, ಅಧಿಕಾರ ಹಾಗೂ ಧರ್ಮಕ್ಕೆ ಸಂಬಂಧಿಸಿದ ಹಾಗೆ ಮೂರು ವಿಭಿನ್ನ ಕಥೆಗಳು ಚಿತ್ರದಲ್ಲಿದೆ. ಅಥರ್ವ್ ಕಥೆ ಬರೆದಿರುವ ಈ ಚಿತ್ರಕ್ಕೆ ಅಥರ್ವ್ ಹಾಗೂ ರಾಜೀವ್ ಕಿರಣ್ ವೆನಿಯಲ್ ಚಿತ್ರಕಥೆ ಬರೆದಿದ್ದಾರೆ. ಕಿರುತೆರೆಯ ‘ಕನ್ನಡತಿ’ ಧಾರಾವಾಹಿ ರೆಮೋಲ, ಸಂಪತ್ ಮೈತ್ರೇಯ, ಬಿ. ಸುರೇಶ್, ರೂಪಾ ರಾಯಪ್ಪ, ಆಶೀಶ್, ಬಿ. ಎಂ. ವೆಂಕಟೇಶ್, ಮೋಹನ್, ಆರ್. ಜೆ ಅನೂಪ, ನಾಗರಾಜ್ ಮುಂತಾದವರು ಸಿನಿಮಾದ ಪ್ರಮುಖ ತಾರಾಬಳಗದಲ್ಲಿದ್ದಾರೆ.
‘ಅಥರ್ವ್ ಪಿಕ್ಚರ್ಸ್’ ಲಾಂಛನದಲ್ಲಿ ವಿಜಯಕುಮಾರ್ ಮತ್ತು ಧರ್ಮೇಂದ್ರ ಎಂ. ರಾವ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣವನ್ನು ಮಾಡುತ್ತಿದ್ದಾರೆ. ರಾಜೀವ್ ಕಿರಣ್ ವೆನಿಯಲ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ರೌಶನ್ ಜಾ ಛಾಯಾಗ್ರಹಣ, ಪ್ರದೀಪ್ ಗೋಪಾಲ್ ಸಂಕಲನ ಹಾಗೂ ಸಿದ್ಧಾರ್ಥ್ ಪರಾಶರ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸದ್ಯ ಬಿಡುಗಡೆಯಾಗಿರುವ ‘ಟೇಲ್ಸ್ ಆಫ್ ಮಹಾನಗರ’ ಸಿನಿಮಾದ ಟೀಸರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಇದೇ ಸೆಪ್ಟೆಂಬರ್ 15 ರಂದು ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆದಿದೆ.