90 ಕೋಟಿಯಲ್ಲಿ ಸಿನಿಮಾ ಮಾಡೋದನ್ನ ನೀವು ಕೇಳಿರುತ್ತೀರಿ. ಆದರೆ ಇದೀಗ ರಾಮ್‌ಚರಣ್ ತೇಜ್ ಅಭಿನಯದ ‘ಗೇಮ್ ಚೇಂಜರ್’ ಚಿತ್ರತಂಡ ಕೇವಲ ಒಂದು ಹಾಡಿಗೆ ಬರೋಬ್ಬರಿ 90 ಕೋಟಿ ಖರ್ಚು ಮಾಡುವ ಯೋಜನೆಯಲ್ಲಿದೆಯಂತೆ!
ಹೌದು, ರಾಮಚರಣ್ ಅಭಿನಯದ ‘ಆರ್‌ಆರ್‌ಆರ್’ ಸಿನಿಮಾದ ‘ನಾಟು… ನಾಟು…’ ಹಾಡಿಗೆ ಕೊಟ್ಯಾಂತರ ರೂಪಾಯಿ ಖರ್ಚು ಮಾಡಲಾಗಿತ್ತು. ಉಕ್ರೇನ್‌ನಲ್ಲಿ ಸುಮಾರು 15 ದಿನಕ್ಕೂ ಹೆಚ್ಚು ಚಿತ್ರೀಕರಣ ನಡೆಸಲಾಗಿದ್ದ ಈ ಹಾಡಿಗೆ ಆಸ್ಕರ್ ಪ್ರಶಸ್ತಿಯೂ ಸಿಕ್ಕಿತ್ತು. ಆ ದಾಖಲೆಯನ್ನು ಈಗ ರಾಮಚರಣ್ ಮುಂದಿನ ಸಿನಿಮಾ ‘ಗೇಮ್ ಚೇಂಜರ್’ ಮುರಿಯುವ ಪ್ಲಾನ್‌ನಲ್ಲಿದೆ.
ಖ್ಯಾತ ನಿರ್ದೇಶಕ ಶಂಕರ್ ನಿರ್ದೇಶನದಲ್ಲಿ ‘ಗೇಮ್ ಚೇಂಚರ್’ ಸಿನಿಮಾ ಮೂಡಿಬರುತ್ತಿದ್ದು, ಈ ಸಿನಿಮಾದಲ್ಲಿ ರಾಮ್ ಚರಣ್‌ಗೆ ನಾಯಕಿಯಾಗಿ ಕಿಯಾರಾ ಅಡ್ವಾನಿ ಜೋಡಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಕೂಡ ಜೋರಾಗಿ ನಡೆಯುತ್ತಿದ್ದು, ಈ ಸಿನಿಮಾದ ಒಂದು ಹಾಡಿಗೆ ಬರೋಬ್ಬರಿ 90 ಕೋಟಿ ಎತ್ತಿಡಲಾಗಿದೆ ಎಂಬ ಸುದ್ದಿ ಸೌಥ್ ಸಿನಿದುನಿಯಾದಲ್ಲಿ ಹರಿದಾಡುತ್ತಿದೆ.
ನಿರ್ದೇಶಕ ಶಂಕರ್ ಬಿಗ್ ಬಜೆಟ್ ಮತ್ತು ಅದ್ಧೂರಿ ಮೇಕಿಂಗ್ ಸಿನಿಮಾಗಳಿಂದಲೇ ಹೆಸರುವಾಸಿ ಹಾಗಾಗಿ, ಒಂದು ಹಾಡಿಗೆ 90 ಕೋಟಿ ಬಜೆಟ್ ಅನ್ನು ಚಿತ್ರತಂಡ ಖರ್ಚು ಮಾಡಿದರೂ ಅಚ್ಚರಿಯಿಲ್ಲ ಎಂಬುದು ಸಿನಿಮಂದಿಯ ಮಾತು. ಆದರೆ ಇಲ್ಲಿಯವರೆಗೆ ‘ಗೇಮ್ ಚೇಂಜರ್’ ಚಿತ್ರತಂಡ ಮಾತ್ರ ಈ ಸುದ್ದಿಯ ಬಗ್ಗೆೆ ತುಟಿಬಿಚ್ಚಿಲ್ಲ. ಹಾಗೇನಾದರೂ ಈ ಸುದ್ದಿ ನಿಜವೇ ಆಗಿದ್ದರೆ, ರಾಮ್ ಚರಣ್ ಸಿನಿಮಾ ಹೊಸ ದಾಖಲೆ ಬರೆಯೋದರಲ್ಲಿ ಅನುಮಾನವಿಲ್ಲ.