ನಟಿ ಮೇಘನಾ ರಾಜ್ ಈಗ ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಮತ್ತೆ ಬೆಳ್ಳಿಪರದೆಯತ್ತ ರೀ-ಎಂಟ್ರಿಯಾಗುತ್ತಿದ್ದಾರೆ. ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ‘ತತ್ಸಮ ತದ್ಭವ’ ಸಿನಿಮಾದಲ್ಲಿ ಮೇಘನಾ ರಾಜ್ ಕಳೆದು ಹೋಗಿರುವ ಹೆಣ್ಣುಮಗುವೊಂದನ್ನು ಹುಡುಕುವ ತಾಯಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಈಗಾಗಲೇ ‘ತತ್ಸಮ ತದ್ಭವ’ ಸಿನಿಮಾದ ಚಿತ್ರೀಕರಣ ಕಾರ್ಯ ಸಂಪೂರ್ಣವಾಗಿದ್ದು, ಸಿನಿಮಾದ ಅಂತಿಮ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇದರ ನಡುವೆಯೇ ನಿಧಾನವಾಗಿ ‘ತತ್ಸಮ ತದ್ಭವ’ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ತಮ್ಮ ಸಿನಿಮಾದ ‘ದೂರಿ ಲಾಲಿ…’ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಅಷ್ಟೇ ಅಲ್ಲದೆ ಈ ಹಾಡನ್ನು ಹೇಳಿ ತಮ್ಮ ಮಕ್ಕಳನ್ನು ತಾಯಂದಿರು ಹೇಗೆ ಮಲಗಿಸುತ್ತಾರೆ? ಎಂಬ ಚಾಲೆಂಜ್ ಕೂಡ ತಾಯಂದಿರಿಗೆ ನೀಡಿದೆ.
ಈ ಚಾಲೆಂಜ್ ಪ್ರಕಾರ ‘ತತ್ಸಮ ತದ್ಭವ’ ಸಿನಿಮಾದ ‘ದೂರಿ ಲಾಲಿ…’ ಹಾಡನ್ನು ಹೇಳಿ ತಮ್ಮ ಮಕ್ಕಳನ್ನು ಮಲಗಿಸುವ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಮೇಘನಾ ರಾಜ್ ಮತ್ತು ಚಿತ್ರತಂಡಕ್ಕೆ ಟ್ಯಾಗ್ ಮಾಡಬೇಕು. ಹೀಗೆ ಬಂದ ವಿಡಿಯೋಗಳಲ್ಲಿ ಅತ್ಯುತ್ತಮವಾದ ಮೂರು ವಿಡಿಯೋಗಳನ್ನು ಅಂತಿಮ ಹಂತಕ್ಕೆ ಆಯ್ಕೆ ಮಾಡಿಕೊಂಡು ಆ ಮೂವರು ತಾಯಂದಿರು ತಮ್ಮ ಮಕ್ಕಳೊಂದಿಗೆ ಮೇಘನರಾಜ್ ಅವರನ್ನು ಭೇಟಿ ಮಾಡಿ ಅವರೊಂದಿಗೆ ಊಟ ಮಾಡುತ್ತಾ ಕೆಲವು ವಿಷಯಗಳನ್ನು ಹಂಚಿಕೊಳ್ಳಬಹುದು ಎಂದು ಚಿತ್ರತಂಡ ತಿಳಿಸಿದೆ.
ಅಂದಹಾಗೆ, ‘ತತ್ಸಮ ತದ್ಭವ’ ಸಿನಿಮಾದ ‘ದೂರಿ ಲಾಲಿ…’ ಹಾಡಿಗೆ ವಾಸುಕಿ ವೈಭವ್ ಸಾಹಿತ್ಯ-ಸಂಗೀತ ನೀಡಿದ್ದಾರೆ. ಸುನಿಧಿ ಗಣೇಶ್ ಹಾಡಿದ್ದಾರೆ. ಮೇಘನರಾಜ್ ಹಾಗೂ ಮಹತಿ ಈ ಹಾಡಿನಲ್ಲಿ ಅಭಿನಯಿಸಿದ್ದಾರೆ. ವಿಶಾಲ್ ಆತ್ರೇಯ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ.