ರಾಜ್ ಬಿ. ಶೆಟ್ಟಿ ನಟನೆ ಮತ್ತು ನಿರ್ದೇಶನದ ಬಹು ನಿರೀಕ್ಷಿತ ʼಟೋಬಿʼ ಸಿನಿಮಾ ರಿಲೀಸ್ ಗೆ ದಿನಗಣನೆ ಆರಂಭವಾಗಿದೆ. ʼಒಂದು ಮೊಟ್ಟೆಯ ಕಥೆʼಯಲ್ಲಿ ಮುಗ್ಧನಾಗಿ ʼಗರುಡ ಗಮನ ವೃಷಭ ವಾಹನʼದಲ್ಲಿ ರಗಡ್ ಆದ ರಾಜ್ ಬಿ. ಶೆಟ್ಟಿ, ಇದೀಗ ʼಟೋಬಿ’ ಸಿನಿಮಾದಲ್ಲಿ ಮಾರಿ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ʼಮಾರಿ ಮಾರಿ ಮಾರಿಗೆ ದಾರಿʼ ಎನ್ನುತ್ತಾ ಫಸ್ಟ್ ಲುಕ್ ನಿಂದ ಗಮನ ಸೆಳೆದಿದ್ದ ʼಟೋಬಿʼ ಸಿನಿಮಾದ ಟ್ರೇಲರ್ ಇತ್ತೀಚಿಗಷ್ಟೇ ಬಿಡುಗಡೆಯಾಗಿದ್ದು, ಈಗಾಗಲೇ ಟ್ರೇಲರ್ ಬರೋಬ್ಬರಿ 10 ಮಿಲಿಯನ್ ವೀವ್ಸ್ ಪಡೆದುಕೊಂಡು ದಾಖಲೆ ಬರೆದಿತ್ತು.
ಇದೀಗ ‘ಟೋಬಿ’ ಸಿನಿಮಾದ ಬಿಡುಗಡೆಗೂ ಹಸಿರು ನಿಶಾನೆ ದೊರೆತಿದೆ. ‘ಟೋಬಿ’ ಸಿನಿಮಾದ ಬಿಡುಗಡೆಗೂ ಒಂದು ವಾರ ಮುಂಚೆ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ‘ಟೋಬಿ’ಗೆ ಯಾವುದೇ ಕಟ್ಸ್ ಅಥವಾ ಮ್ಯೂಟ್ಸ್ ಇಲ್ಲದೆ ʼಯು/ಎʼ ಪ್ರಮಾಣ ಪತ್ರವನ್ನು ನೀಡಿದೆ. ಇನ್ನು ಸೆನ್ಸಾರ್ ಬೋರ್ಡ್ ‘ಟೋಬಿ’ ಸಿನಿಮಾಕ್ಕೆ ʼಯು/ಎʼ ಪ್ರಮಾಣ ಪತ್ರ ನೀಡಿರುವ ಖುಷಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ನಟ ಕಂ ನಿರ್ದೇಶಕ ರಾಜ್ ಬಿ. ಶೆಟ್ಟಿ, ʼಮಾರಿʼಯನ್ನು ಹಿಡಿಯಲು ನೀವು ರೆಡಿಯಾ? ಎಂದು ಬರೆದುಕೊಂಡಿದ್ದಾರೆ.