ಬಣ್ಣದ ಲೋಕದಲ್ಲಿ ಅದೃಷ್ಟ ಪರೀಕ್ಷೆಗಿಳಿಯುವ ಹೊತ್ತಲ್ಲಿ ಕೆಲ ನಟ-ನಟಿಯರು ಹೆಸರು ಬದಲಾಯಿಸಿಕೊಳ್ಳುವುದು ಸಹಜ. ಈ ಹಿಂದೆ ಅನೇಕರು ಸ್ಕ್ರೀನ್ ನೇಮ್ ಚೇಂಜ್ ಮಾಡ್ಕೊಂಡು ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಿದ್ದಾರೆ. ಅದ್ರಂತೇ, ಸ್ಯಾಂಡಲ್‍ವುಡ್‍ನ ಕನಸಿನ ರಾಣಿ ಮಾಲಾಶ್ರೀಯವರ ಮುದ್ದಿನ ಮಗಳು ಕೂಡ ಇತ್ತೀಚೆಗೆ ಹೆಸರು ಬದಲಿಸಿಕೊಂಡಿದ್ದರು. ಮೂಲ ನಾಮಧೇಯ ಅನನ್ಯಾ ಎನ್ನುವ ಹೆಸರನ್ನು ಚೇಂಜ್ ಮಾಡ್ಕೊಂಡು ರಾಧನಾ ಹೆಸರಲ್ಲಿ ಕನ್ನಡ ಚಿತ್ರರಂಗಕ್ಕೆ ಪರಿಚಯಗೊಂಡಿದ್ದರು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಕಾಟೇರ’ ಸಿನಿಮಾಗೆ ನಾಯಕಿಯಾಗುವ ಮೂಲಕ ಚಂದನವನ ಪ್ರವೇಶಿಸಿದ್ದರು. ಫಸ್ಟ್ ಲುಕ್ ಮೂಲಕವೇ ಎಲ್ಲರ ಗಮನ ಸೆಳೆದಿದ್ದ ರಾಧನಾ ಈಗ ಮತ್ತೊಮ್ಮೆ ಹೆಸರು ಬದಲಾಯಿಸಿಕೊಂಡು ಸುದ್ದಿಯಲ್ಲಿದ್ದಾರೆ.
ಹೌದು, ರಾಧನಾ ಅಂತಿದ್ದ ಹೆಸರನ್ನ ಆರಾಧನಾ ಎಂದು ಬದಲಿಸಿಕೊಂಡಿದ್ದಾರೆ. ಈ ಹೆಸರು ಬರೀ ಸಿನಿಮಾಗಾಗಿ ಅಲ್ಲ ಬದಲಾಗಿ ಇನ್ಮುಂದೆ ರಾಧನಾ ರಾಮ್ ರಿಯಲ್ ಲೈಫ್‍ನಲ್ಲೂ ಆರಾಧನಾ ಹೆಸರಿನಿಂದಲೇ ಗುರ್ತಿಸಿಕೊಳ್ಳಲು ಇಚ್ಚಿಸಿದ್ದಾರೆ. ಈ ವಿಚಾರವನ್ನ ಖುದ್ದು ಮಾಲಾಶ್ರೀಯವರೇ ಬಹಿರಂಗಪಡಿಸಿದ್ದಾರೆ. ತಮ್ಮ ಪುತ್ರಿಯ ಹೆಸರು ಬದಲಾಗಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಮಾಲಾಶ್ರೀ, ‘ನಾನು, ರಾಕ್ ಲೈನ್ ವೆಂಕಟೇಶ್ ಹಾಗೂ ತರುಣ್ ಸುಧೀರ್ ಮೂರು ಜನ ಚರ್ಚಿಸಿ ಆರಾಧನಾ ಎಂಬ ಹೆಸರನ್ನು ಆಯ್ಕೆ ಮಾಡಿದ್ದೇವೆ. ಈ ಹೆಸರು ಬರೀ ‘ಕಾಟೇರ’ ಸಿನಿಮಾಕ್ಕೆ ಮಾತ್ರವಲ್ಲ. ಇನ್ನು ಮುಂದೆ ನನ್ನ ಮಗಳ ಹೆಸರೆ ಆರಾಧನಾ. ಮುಂದಿನ ಚಿತ್ರಗಳಲ್ಲೂ ಆರಾಧನಾ ಎಂಬ ಹೆಸರಿನಿಂದಲೇ ಅಭಿನಯಿಸಿಲಿದ್ದಾರೆ. ತಾವೆಲ್ಲರೂ ಮುಂದೆ ಆರಾಧನಾ ಹೆಸರನ್ನೇ ಬಳಸಿಕೊಳ್ಳಬೇಕು’ ಎಂದು ವಿನಂತಿಸಿದ್ದಾರೆ.
ನಟಿ ಮಾಲಾಶ್ರೀ ನಾಲ್ಕು ದಶಕಗಳ ಕಾಲ ಚಿತ್ರರಂಗವನ್ನಾಳಿದವರು. ಬೆಳ್ಳಿತೆರೆಯ ಬಹುಬೇಡಿಕೆಯ ನಟಿಯಾಗಿ, ಆ್ಯಕ್ಷನ್ ಕ್ವೀನ್ ಆಗಿ ಕಮಾಲ್ ಮಾಡಿದ ಕನಸಿನ ರಾಣಿಗೆ, ತನ್ನಂತೆ ತನ್ನ ಮಗಳು ಕೂಡ ಸ್ಟಾರ್ ನಾಯಕಿಯಾಗಿ ಗುರ್ತಿಸಿಕೊಳ್ಳುವ ಬಯಕೆಯಿದೆ. ಹೀಗಾಗಿ, ಪುತ್ರಿ ಆರಾಧನಾಗೆ ಆಧಾರಸ್ತಂಬವಾಗಿ ನಿಂತಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಜೊತೆ ಚಂದನವನಕ್ಕೆ ಮಗಳನ್ನು ಪರಿಚಯಿಸುತ್ತಿದ್ದಾರೆ. ಪ್ರಭಾವತಿಯಾಗಿ ಬೆಳ್ಳಿತೆರೆ ಮೇಲೆ ಮಿಂಚಲು ಆರಾಧನಾ ರೆಡಿಯಾಗಿದ್ದಾರೆ. ರಾಕ್‍ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಕಾಟೇರ ಸಿನಿಮಾ ಅದ್ದೂರಿಯಾಗಿ ಮೂಡಿಬರುತ್ತಿದೆ. ತರುಣ್ ಸುಧೀರ್ ನಿರ್ದೇಶನ ಚಿತ್ರಕ್ಕಿದೆ. ಸದ್ಯ ಈ ಸಿನಿಮಾದ ಪ್ರೊಡಕ್ಷನ್ ಕೆಲಸಗಳು ಒಂದೆಡೆ, ಭರದಿಂದ ನಡೆಯುತ್ತಿದೆ.