ನಟಿ ಮಮತಾ ರಾಹುತ್ ಮುಖ್ಯ ಪಾತ್ರದಲ್ಲಿ ಅಭಿನಯಿಸಿರುವ, ಮಹಿಳಾಪ್ರದಾನ ಕಥಾಹಂದರ ಹೊಂದಿರುವ ‘ತಾರಿಣಿ’ ಸಿನಿಮಾದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದ್ದು, ಸದ್ಯ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದೆ. ಇದೊಂದು ಗರ್ಭಿಣಿ ಮಹಿಳೆಯೊಬ್ಬಳ ಕಥೆಯಾಧಾರಿತ ಸಿನಿಮಾವಾಗಿದ್ದು, ನಿಜ ಜೀವನದಲ್ಲೂ ಗರ್ಭಿಣಿಯಾಗಿರುವಾಗಲೇ ನಟಿ ಮಮತಾ ರಾಹುತ್ ಸಿನಿಮಾದ ಈ ಪಾತ್ರವನ್ನು ನಿರ್ವಹಿಸಿದ್ದಾರೆ. ‘ಶ್ರೀ ಗಜನಿ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು ಈ ಸಿನಿಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ಸಿದ್ದು ಪೂರ್ಣಚಂದ್ರ ಈ ಸಿನಿಮಾಕ್ಕೆ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
‘ನಟಿ ಮಮತಾ ರಾಹುತ್ ಈ ಕಥೆಗಾಗಿಯೇ ಮಾನಸಿಕ ಪೂರ್ವತಯಾರಿ ಮಾಡಿಕೊಂಡು ಉತ್ತಮವಾಗಿ ನಟಿಸಿದ್ದಾರೆ. ನಿಜ ಜೀವನದಲ್ಲು ಸ್ವತಃ ಗರ್ಭಿಣಿಯಾಗಿಯೇ ಮನೋಜ್ಞವಾಗಿ ನಟಿಸಿದ್ದಾರೆಂದು ಅವರದೇ ಮಗುವಿನ ದೃಶ್ಯವನ್ನು ಹುಟ್ಟಿದ ಕೂಡಲೇ ಸೆರೆಹಿಡಿಯಲಾಗಿದೆ. ಒಟ್ಟಾರೆ ನೈಜವಾಗಿ ಸಹಜವಾಗಿ ಎಲ್ಲಾ ಕಲಾವಿದರೂ ಕೂಡ ಅಭಿನಯಿಸಿದ್ದಾರೆ’ ಎಂಬುದು ಚಿತ್ರದ ನಿರ್ದೇಶಕ ಸಿದ್ದು ಪೂರ್ಣಚಂದ್ರ ಅವರ ಮಾತು.
ಉಳಿದಂತೆ ರೋಹಿತ್, ಭವಾನಿ ಪ್ರಕಾಶ್, ವಿಜಯಲಕ್ಷ್ಮಿ, ಡಾ. ಸುರೇಶ್ ಕೋಟ್ಯಾನ್ ಚಿತ್ರಾಪು, ಸುಧಾ ಪ್ರಸನ್ನ, ಪ್ರಮಿಳಾ ಸುಬ್ರಹ್ಮಣ್ಯಂ, ಮಟಿಲ್ಡಾ ಡಿಸೋಜಾ, ದೀಪಿಕಾ ಗೌಡ, ತೇಜಸ್ವಿನಿ, ಶ್ವೇತಾ, ಮಂಜು ಮುಂತಾದ ಕಲಾವಿದರು ‘ತಾರಿಣಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.