ಕರುನಾಡ ಚಕ್ರವರ್ತಿ ಶಿವರಾಜಕುಮಾರ್, ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ನಟ ಪ್ರಭುದೇವ ಮೊದಲ ಬಾರಿಗೆ ಒಟ್ಟಿಗೆ ಅಭಿನಯಿಸುತ್ತಿರುವ ‘ಕರಟಕ ದಮನಕ’ ಸಿನಿಮಾದ ಚಿತ್ರೀಕರಣ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಈಗಾಗಲೇ ‘ಕರಟಕ ದಮನಕ’ ಸಿನಿಮಾದ ಮಾತಿನ ಭಾಗ ಪೂರ್ಣಗೊಳಿಸಿರುವ ಚಿತ್ರತಂಡ, ಇದೀಗ ಕೊನೆಯ ಹಂತದಲ್ಲಿ ಸಿನಿಮಾದ ಹಾಡುಗಳನ್ನು ಚಿತ್ರೀಕರಿಸುತ್ತಿದೆ.
‘ರಾಕ್ ಲೈನ್ ಎಂಟರ್ಟೈನ್ಮೆಂಟ್ಸ್’ ಬ್ಯಾನರಿನಲ್ಲಿ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಕರಟಕ ದಮನಕ’ ಸಿನಿಮಾಕ್ಕೆ ಯೋಗರಾಜ್ ಭಟ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಟ ಶಿವರಾಜಕುಮಾರ್ ಅವರಿಗೆ ಪ್ರಿಯಾ ಆನಂದ್ ನಾಯಕಿಯಾಗಿ ಮತ್ತು ಪ್ರಭುದೇವ ಅವರಿಗೆ ನಿಶ್ವಿಕಾ ನಾಯ್ಡು ನಾಯಕಿಯರಾಗಿ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ತೆಲುಗು ನಟ ತನಿಕೆಲ್ಲ ಭರಣಿ ಅವರಂತಹ ಹಿರಿಯ ಕಲಾವಿದರು ಈ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ‘ಕರಟಕ ದಮನಕ’ ಸಿನಿಮಾದ ಬಗ್ಗೆ ಮಾತನಾಡಿರುವ ನಿರ್ದೇಶಕ ಯೋಗರಾಜ್ ಭಟ್, ‘ಈಗಾಗಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಒಂದು ವರ್ಷಗಳಾಗಿದೆ. ‘ಕರಟಕ ದಮನಕ’ ಎಂದರೆ ಎರಡು ಕುತಂತ್ರಿ ನರಿಗಳ ಹೆಸರು. ಸಾಮಾನ್ಯವಾಗಿ ಇಬ್ಬರನ್ನು ಹೆಚ್ಚು ಸಲ ಒಟ್ಟಾಗಿ ನೋಡಿದಾಗ ‘ಕರಟಕ ದಮನಕ’ ಎನ್ನುವುದು ಉಂಟು. ನಮ್ಮ ಚಿತ್ರದಲ್ಲಿ ಈ ಪಾತ್ರಗಳನ್ನು ಶಿವಣ್ಣ ಹಾಗೂ ಪ್ರಭುದೇವ ಮಾಡಿದ್ದಾರೆ. ಸಿನಿಮಾದಲ್ಲಿ ಅವರಿಬ್ಬರ ಎನರ್ಜಿ ನೋಡಿದರೆ ನಿಜಕ್ಕೂ ಖುಷಿಯಾಗುತ್ತದೆ. ತೆರೆಮೇಲೆ ಅವರಿಬ್ಬರ ಜೋಡಿಯಾಟ ನೋಡಿ ಆನಂದಿಸಬೇಕು’ ಎನ್ನುತ್ತಾರೆ.
‘ಕರಟಕ ದಮನಕ’ ಸಿನಿಮಾದ ಏಳು ಹಾಡುಗಳಿಗೆ ವಿ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಮುಂದಿನ ವರ್ಷದ ಆರಂಭದಲ್ಲಿ ‘ಕರಟಕ ದಮನಕ’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.