ಕನ್ನಡದ ರ್ಯಾಪರ್ ಕಂ ನಟ ಚಂದನ್ ಶೆಟ್ಟಿ ಸದ್ಯ ‘ಎಲ್ರ ಕಾಲೆಳೆಯುತ್ತೆ ಕಾಲ’ ಸಿನಿಮಾದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದು, ಇನ್ನೇನು ಈ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಇದರ ಬೆನ್ನಲ್ಲೇ ಚಂದನ್ ಶೆಟ್ಟಿ ಸದ್ದಿಲ್ಲದೆ, ಹೊಸ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಸುದ್ದಿ ಹೊರಬಿದ್ದಿತ್ತು. ಜೊತೆಗೆ ಚಿತ್ರತಂಡ ಚಿಕ್ಕ ಪ್ರೊಮೋ ಒಂದನ್ನು ಬಿಡುಗಡೆ ಮಾಡುವ ಮೂಲಕ ಸಿನಿಪ್ರಿಯರಲ್ಲಿ ಸಣ್ಣ ಕುತೂಹಲವನ್ನು ಮೂಡಿಸುವಲ್ಲಿ ಯಶಸ್ವಿಯಾಗಿತ್ತು. ಇದೀಗ ಚಂದನ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಕೂಡ ಅನೌನ್ಸ್ ಆಗಿದೆ.
ಅಂದಹಾಗೆ, ಚಂದನ್ ಶೆಟ್ಟಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆೆ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಎಂಬ ಶೀರ್ಷಿಕೆಯನ್ನು ಇಡಲಾಗಿದೆ. ಇದೊಂದು ಕಾಲೇಜಿನ ಸುತ್ತ ನಡೆಯುವ ಕಥಾಹಂದರ ಹೊಂದಿದ ಸಿನಿಮಾವಾದ್ದರಿಂದ, ಈ ಸಿನಿಮಾದ ಟೈಟಲ್ ಅನ್ನು ಕಾಲೇಜ್ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಬಿಡುಗಡೆಗೊಳಿಸಿರುವುದು ವಿಶೇಷ. ರಾಜ್ಯದ ವಿವಿಧ ಭಾಗಗಳ ಹಲವು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸ್ವತಃ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಶೀರ್ಷಿಕೆ ಬಿಡುಗಡೆಗೊಳಿಸಿ, ಸಾಮಾಜಿಕ ಜಾಲತಾಣಗಳ ಮೂಲಕ ಅದನ್ನು ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಈ ಹಿಂದೆ ಶ್ರೀಮುರುಳಿ ನಾಯಕನಾಗಿ ನಟಿಸಿದ್ದ ‘ಲೂಸ್ಗಳು’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅರುಣ್ ಅಮುಕ್ತ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದಲ್ಲಿ ಚಂದನ್ ಶೆಟ್ಟಿ ಜೊತೆಗೆ ಅಮರ್, ಭಾವನಾ, ಮಾನಸಿ, ವಿವಾನ್, ಭವ್ಯಾಾ, ಸುನೀಲ್ ಪುರಾಣಿಕ್, ಅರವಿಂದ ರಾವ್, ಸಿಂಚನಾ, ರಘು ರಾಮನಕೊಪ್ಪ, ಪ್ರಶಾಂತ್ ಸಂಬರ್ಗಿ, ಕಾಕ್ರೊಚ್ ಸುಧಿ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದಂತೆ ಈ ಸಿನಿಮಾಕ್ಕೆೆ ವಿಜೇತ್ ಕೃಷ್ಣ, ವಾಸು ದೀಕ್ಷಿತ್ ಮತ್ತು ಶಶಾಂಕ್ ಶೇಷಗಿರಿ ಸಂಗೀತ ನಿರ್ದೇಶನವಿದ್ದು ಭರ್ಜರಿ ಚೇತನ್ ಮತ್ತು ವಾಸುಕಿ ವೈಭವ್ ಸಾಹಿತ್ಯವಿದೆ. ಸುಬ್ರಮಣ್ಯ ಕುಕ್ಕೆೆ ಮತ್ತು ಎ.ಸಿ ಶಿವಲಿಂಗೇಗೌಡ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿಿದ್ದಾರೆ. ಚಿತ್ರಕ್ಕೆೆ ಕುಮಾರ್ ಗೌಡ ಛಾಯಾಗ್ರಹಣ, ಪವನ್ ಗೌಡ ಸಂಕಲನವಿದೆ. ಸದ್ಯ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಿರುವ ಚಿತ್ರತಂಡ, ಶೀಘ್ರದಲ್ಲಿಯೇ ಸಿನಿಮಾದ ಚಿತ್ರೀಕರಣಕ್ಕೆ ಹೊರಡುವ ಯೋಜನೆ ಹಾಕಿಕೊಂಡಿದೆ.