ನಟ ವಿಜಯ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್ ಜೋಡಿಯಾಗಿ ನಟಿಸಿರುವ ‘ಕದ್ದ ಚಿತ್ರ’ ಸಿನಿಮಾದ ಮೊದಲ ಟ್ರೇಲರ್ ಬಿಡುಗಡೆಯಾಗಿದೆ. ನಿರ್ದೇಶಕರಾದ ಪವನ್ ಒಡೆಯರ್, ರಾಘು ಶಿವಮೊಗ್ಗ ಮೊದಲಾದ ಗಣ್ಯರು ‘ಕದ್ದ ಚಿತ್ರ’ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಹಾಜರಿದ್ದು ಚಿತ್ರತಂಡಕ್ಕೆ ಶುಭ ಹಾರೈಸಿದರು. ಇದೇ ವೇಳೆ ಮಾತನಾಡಿದ ನಾಯಕ ನಟ ವಿಜಯ ರಾಘವೇಂದ್ರ, ‘ಆರಂಭದಲ್ಲಿ ಈ ಥರದ ಪಾತ್ರ ಮಾಡಲು ಹಿಂದೇಟು ಹಾಕಿದ್ದೆ. ಆದರೆ ನಿರ್ದೇಶನ ಸುಹಾಸ್ ಕೃಷ್ಣ ಮತ್ತು ಚಿತ್ರತಂಡದ ಮೇಲಿನ ಭರವಸೆ ಇಟ್ಟುಕೊಂಡು ಈ ಪಾತ್ರ ಒಪ್ಪಿಕೊಂಡೆ. ಪತ್ನಿ ಸ್ಪಂದನಾಗೂ ಈ ಸಿನಿಮಾದ ಕಥೆ, ಪಾತ್ರ ಮತ್ತು ತಂಡದ ಮೇಲೆ ಸಾಕಷ್ಟು ಕಾನ್ಫಿಡೆನ್ಸ್ ಇತ್ತು. ಸಿನಿಮಾದ ಕಥೆ ಮತ್ತು ಪಾತ್ರ ಆಡಿಯನ್ಸ್ ಗೆ ಇಷ್ಟವಾಗಲಿದೆ’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
‘ಶಾನ್ವಿ ಟಾಕೀಸ್’ ಮತ್ತು ‘ದ್ವಾರಕ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಸಂದೀಪ್ ಹೆಚ್. ಕೆ ನಿರ್ಮಿಸಿರುವ ‘ಕದ್ದ ಚಿತ್ರ’ ಸಿನಿಮಾಕ್ಕೆ ಸುಹಾಸ್ ಕೃಷ್ಣ ನಿರ್ದೇಶನವಿದೆ. ಇದೊಂದು ಕೃತಿಚೌರ್ಯದ ಕಥಾಹಂದರ ಹೊಂದಿರುವ ಸಿನಿಮಾ. ಬರಹಗಾರನೊಬ್ಬನ ಬದುಕಿನ ಕೇಸ್ ಸ್ಟಡಿ ಈ ಸಿನಿಮಾದಲ್ಲಿದೆ. ಜೊತೆಗೆ ಒಂದು ಕ್ರೈಂ ಎಳೆಯನ್ನು ಇಟ್ಟುಕೊಂಡು ಸಿನಿಮಾವನ್ನು ತೆರೆಮೇಲೆ ತರಲಾಗಿದೆ ಎಂಬುದು ಚಿತ್ರದ ಕಥಾಹಂದರದ ಬಗ್ಗೆ ಚಿತ್ರತಂಡದ ಮಾತು
‘ಕದ್ದ ಚಿತ್ರ’ ಸಿನಿಮಾದಲ್ಲಿ ನಟ ವಿಜಯ ರಾಘವೇಂದ್ರ, ನಮ್ರತಾ ಸುರೇಂದ್ರನಾಥ್ ಅವರೊಂದಿಗೆ ಬೇಬಿ ಆರಾಧ್ಯ, ರಾಘು ಶಿವಮೊಗ್ಗ, ಬಾಲಾಜಿ ಮನೋಹರ್, ಸುಜಿತ್ ಸುಪ್ರಭ, ಸ್ಟೀಫನ್, ವಿನಯ್ ರೆಡ್ಡಿ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.‘ಕದ್ದ ಚಿತ್ರ’ ಸಿನಿಮಾದ ಹಾಡುಗಳಿಗೆ ಕೃಷ್ಣರಾಜ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗೌತಮ್ ಮನು ಛಾಯಾಗ್ರಹಣ, ಶ್ರೀ ಕ್ರೇಜಿಮೈಂಡ್ಸ್ ಸಂಕಲನವಿದೆ. ಈಗಾಗಲೇ ಬಿಡುಗಡೆಯಾಗಿರುವ ಸಿನಿಮಾದ ಹಾಡುಗಳಿಗೆ ಮತ್ತು ಟ್ರೇಲರಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಸೆಪ್ಟೆಂಬರ್ 8ಕ್ಕೆ ‘ಕದ್ದ ಚಿತ್ರ’ ಸಿನಿಮಾ ತೆರೆಗೆ ಬರುತ್ತಿದೆ.