ಬಾಲಿವುಡ್ ಸೂಪರ್ ಸ್ಟಾರ್ ಆಮೀರ್ ಖಾನ್ ಸೋಲಿನ ಸುಳಿಗೆ ಸಿಕ್ಕಿದ್ದು, ಕಂಗ್ ಕಂಗಾಲಾಗಿ ಕಲಾಜಗತ್ತು ತೊರೆದಿದ್ದು ನಿಮಗೆಲ್ಲ ಗೊತ್ತೆಯಿದೆ. ಇದೀಗ ಮತ್ತೆ ಕಲಾ ಲೋಕಕ್ಕೆ ಕಂಬ್ಯಾಕ್ ಆಗೋದಕ್ಕೆ ಬಾಲಿವುಡ್ ಘಜಿನಿ ಸಿದ್ದತೆ ನಡೆಸಿರುವ ಬಗ್ಗೆ ಸುದ್ದಿ ಹೊರಬಿದ್ದಿದೆ. ಸೋಲಿಗೆ ಸೆಡ್ಡು ಹೊಡೆಯಲು, ಗೆಲುವಿನ ಚುಕ್ಕಾಣಿ ಹಿಡಿಯಲು ದಂಗಲ್ ಹೀರೋ ಶಪಥಗೈದಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಮಾತ್ರವಲ್ಲ ಸಂಕ್ರಾಂತಿಗೆ ಸಿನಿಮಾ ಶುರು ಮಾಡಿ, ಮುಂದಿನ ಕ್ರಿಸ್ ಮಸ್‍ಗೆ ಸಿನಿಮಾ ರಿಲೀಸ್ ಮಾಡಬೇಕು ಅಂತ ಪ್ಲ್ಯಾನ್ ಮಾಡಿದ್ದಾರಂತೆ. ಆ ಬಗ್ಗೆ ಒಂದಿಷ್ಟು ಡೀಟೈಲ್ಸ್ ಇಲ್ಲಿದೆ ಓದಿ
ಬಾಲಿವುಡ್ ಘಜಿನಿ ಪಾಲಿಗೆ ಗೆಲುವು ಮರೀಚಿಕೆಯಂತಾಗಿದೆ. ಸಕ್ಸಸ್ ಆಗೋಕೆ ಗೆದ್ದು ಗಹಗಹಿಸೋಕೆ ಎಷ್ಟೇ ಶ್ರಮವಹಿಸಿದ್ರೂ ಕೂಡ ಯಶಸ್ಸು ದಕ್ಕುತ್ತಿಲ್ಲ. ಬೆವರು ಸುರಿಸಿ, ರಕ್ತ ಬಸಿದು ಮಾಡಿದ ಸಿನಿಮಾಗಳು ಕೈ ಹಿಡಿಯುತ್ತಿಲ್ಲ. ಸುಮಾರು ಏಳು ವರ್ಷಗಳಿಂದ ಮಾಡಿದ ಎಲ್ಲಾ ಸಿನಿಮಾಗಳು ಬಾಕ್ಸ್ ಆಫೀಸ್‍ನಲ್ಲಿ ಮಕಾಡೆ ಮಲಗಿವೆ. ದಂಗಲ್ ಹೀರೋಗೆ ಸಿನಿಮಾ ಸಹವಾಸನೇ ಬೇಡ ಎನ್ನುವಷ್ಟರ ಮಟ್ಟಿಗೆ ತಲೆಬೇನೆ ತಂದೊಡ್ಡಿವೆ.
ಒಂದ್ಕಾಲಕ್ಕೆ ಬೆಳ್ಳಿತೆರೆ ಹಾಗೂ ಬಾಕ್ಸ್ ಆಫೀಸ್‍ಗೆ ಆಮೀರ್ ಸುಲ್ತಾನನಾಗಿದ್ದರು. ಪಿಕೆ ಸಿನಿಮಾದ ಮೂಲಕ 700 ಕೋಟಿ ಕೊಳ್ಳೆಹೊಡೆದಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್, `ದಂಗಲ್’ ಚಿತ್ರದ ಮೂಲಕ 2000 ಕೋಟಿ ಮೂಟೆಕಟ್ಟಿ ಇಂಡಿಯನ್ ಬಾಕ್ಸ್ ಆಫೀಸ್‍ಗೆ ಬಾಸ್ ಆಗಿದ್ದರು. ಆಗ ಅಶ್ವಮೇಧ ಕುದುರೆಯನ್ನೇರಿ ಕುಳಿತು ನನ್ನನ್ನು ಕಟ್ಟಿಹಾಕಲು ಯಾರಿಂದಲಾದರೂ ಸಾಧ್ಯವಾ ಎಂದು ಕಣ್ಣಲ್ಲೇ ಕೆಣಕಿದ್ದರು. ಆದರೆ, ದಂಗಲ್ ಚಿತ್ರವೇ ಕೊನೆ ಅನಂತರ ತೆರೆಗೆ ಬಂದ ಸೀಕ್ರೇಟ್ ಸೂಪರ್ ಸ್ಟಾರ್, ಥಗ್ಸ್ ಆಫ್ ಹಿಂದೂಸ್ತಾನ್ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಮುಗ್ಗರಿಸಿ ಬಿದ್ವು. ಬಹುನಿರೀಕ್ಷಿತ ಲಾಲ್ ಸಿಂಗ್ ಛಡ್ಡಾ ಕೂಡ ನಿರೀಕ್ಷಿತ ಮಟ್ಟ ತಲುಪದೇ ಮಿಸ್ಟರ್ ಪರ್ಫೆಕ್ಷನಿಸ್ಟ್‍ನ ಖಿನ್ನತೆಗೊಳಗಾಗುವಂತೆ ಮಾಡ್ತು.
ಹೌದು, ಬಿಟೌನ್ ಅಂಗಳದಲ್ಲಿ ಹೀಗೊಂದು ಸುದ್ದಿ ಹರಿದಾಡಿತ್ತು. ಲಾಲ್ ಸಿಂಗ್ ಚಡ್ಡಾ ಸೋಲಿನಿಂದ ಆಮೀರ್ ಮಾನಸಿಕ ಖಿನ್ನತೆಗೊಳಗಾಗಿದ್ದಾರೆಂದು ಹಲವು ವೆಬ್‍ಸೈಟ್‍ಗಳು ವರದಿ ಮಾಡಿದ್ವು. ಅದಕ್ಕೆ ಪೂರಕವೆಂಬಂತೆ ಆಮೀರ್ ಚಿತ್ರರಂಗದಿಂದ ಬ್ರೇಕ್ ಪಡೆಯುವುದಾಗಿ ಘೋಷಿಸಿದರು. ಸದ್ಯಕ್ಕೆ ಸಿನಿಮಾರಂಗಕ್ಕೆ ಮರಳೋದು ಡೌಟೇ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ಇತ್ತೀಚೆಗೆ ಕಿಂಗ್ ಖಾನ್ ಶಾರುಖ್ ಹಾಗೂ ಸುಲ್ತಾನ್ ಸಲ್ಮಾನ್ ಖಾನ್ ಆಮೀರ್‍ಗೆ ಧೈರ್ಯ ತುಂಬಿ, ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುವಂತೆ ಕೇಳಿಕೊಂಡಿರುವುದಾಗಿ ಸುದ್ದಿಯಾಗಿತ್ತು. ಅದೀಗ ನಿಜವಾಗ್ತಿದೆ, ಧೂಮ್ ಹೀರೋ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯಲು ಸಿದ್ದತೆ ನಡೆಸಿರುವ ಬಗ್ಗೆ ಅಪ್‍ಡೇಟ್ ಲಭ್ಯವಾಗಿದೆ. ಕಳೆದೊಂದು ವರ್ಷದಿಂದ ಮಾಯಲೋಕದಿಂದ ದೂರವಿರುವ ಘಜಿನಿ ಶೀಘ್ರದಲ್ಲೇ ಕಣಕ್ಕಿಳಿಯೋ ಬಗ್ಗೆ ಸುದ್ದಿ ಸಿಕ್ಕಿದೆ.
ಟ್ರೇಡ್ ಅನಲಿಸಿಸ್ಟ್ ತರಣ್ ಆದರ್ಶ್ ಟ್ವೀಟ್ ಮಾಡಿರುವ ಪ್ರಕಾರ 2024 ಜನವರಿ 20ರಂದು ದಂಗಲ್ ಹೀರೋ ಹೊಸ ಸಿನಿಮಾ ಸೆಟ್ಟೇರಲಿದೆ. ಅದೇ ವರ್ಷ ಡಿಸೆಂಬರ್ 20ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಚಿತ್ರ ಬಿಡುಗಡೆಯಾಗಲಿದೆ. ಅಮೀರ್ ಖಾನ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಚಿತ್ರ ತಯ್ಯಾರಾಗಲಿದ್ದು, ಪ್ರಿಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿರುವುದಾಗಿ ತರಣ್ ಟ್ವೀಟ್ ಮಾಡಿದ್ದಾರೆ. ಇದರ ಮೇಲೆ ಮತ್ತಷ್ಟು ವರ್ಕ್ ಮಾಡಿ ಡೀಟೈಲ್ಸ್ ಕಲೆಹಾಕಿರೋ ಕೆಲ ಖಾಸಗಿ ವೆಬ್‍ಸೈಟ್‍ಗಳು, ಘಜಿನಿಗೆ ದಿನೇಶ್ ವಿಜಾ ಡೈರೆಕ್ಷನ್ ಮಾಡ್ತಿದ್ದಾರೆ. ಭಾರತೀಯ ವಿಶೇಷ ಪ್ರಾಸಿಕ್ಯೂಟರ್ ಉಜ್ವಲ್ ನಿಕಮ್ ಅವರ ಬಯೋಪಿಕ್‍ಗೆ ಬಣ್ಣ ಹಚ್ಚಲು ಆಮೀರ್ ಉತ್ಸುಕರಾಗಿದ್ದಾರೆ ಅಂತೆಲ್ಲಾ ಸುದ್ದಿ ಮಾಡಿದ್ದಾರೆ. ಉಜ್ವಲ್ ನಿಕಮ್ ಅವರು ಮುಂಬೈ ದಾಳಿ, ಗುಲ್ಶನ್ ಕುಮಾರ್ ಮರ್ಡರ್ ಕೇಸ್ ಸೇರಿದಂತೆ ಹಲವು ಹೈ ಪ್ರೊಫೈಲ್ ಕೇಸ್‍ಗಳನ್ನು ಕೈಗೆತ್ತಿಕೊಂಡು ಅನ್ಯಾಯದ ವಿರುದ್ದ ಹೋರಾಟ ನಡೆಸಿದ್ದಾರೆ. ಇಂತಹ ವಿಶೇಷ ವಕೀಲರ ಬಯೋಪಿಕ್‍ನ ತೆರೆಮೇಲೆ ತರುವುದಕ್ಕೆ ದಿನೇಶ್ ವಿಜಾ ಅವರು ಮನಸ್ಸು ಮಾಡಿದ್ದು, ಆಮೀರ್ ಖಾನ್ ಬಣ್ಣ ಹಚ್ಚುವುದರ ಜೊತೆಗೆ ಬಂಡವಾಳ ಹೂಡುವುದಕ್ಕೂ ಕೂಡ ಸಿದ್ದರಾಗಿದ್ದಾರಂತೆ.
ಕಳೆದೊಂದು ವರ್ಷದಿಂದ ಸಾಕಷ್ಟು ಸ್ಕ್ರಿಪ್ಟ್ ಕೇಳಿರೋ ಆಮೀರ್ ಖಾನ್, ಉಜ್ವಲ್ ನಿಕಮ್ ಹಾಗೂ ಸ್ಟಾರ್ ಕ್ರಿಕೆಟಿಗ ಲಾಲಾ ಅಮರನಾಥ್ ಜೀವನ ಚರಿತ್ರೆಗೆ ಜೀವತುಂಬಲು ಕಾತುರರಾಗಿರುವ ಬಗ್ಗೆ ಸುದ್ದಿಯಾಗ್ತಿದೆ. ಡಂಕಿ ಸಿನಿಮಾದ ನಂತರ ರಾಜ್‍ಕುಮಾರ್ ಹಿರಾನಿಯವರು ಮಿಸ್ಟರ್ ಪರ್ಫೆಕ್ಷನಿಸ್ಟ್‍ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಂತೆ. ಲಾಲಾ ಅಮರನಾಥ್ ಬಯೋಪಿಕ್ ಡೈರೆಕ್ಷನ್ ಮಾಡಲಿದ್ದಾರಂತೆ. ಈ ಎಲ್ಲಾ ಸುದ್ದಿ ನಡುವೆ ದಂಗಲ್ ಹೀರೋ ದಕ್ಷಿಣ ಭಾರತೀಯ ಚಿತ್ರರಂಗಕ್ಕೆ ಕಾಲಿಡ್ತಾರೆ. ರಾಜಮೌಳಿ ಹಾಗೂ ಪ್ರಿನ್ಸ್ ಕಾಂಬೋದಲ್ಲಿ ಬರ್ತಿರೋ ಹೈವೋಲ್ಟೇಜ್ ಪ್ರಾಜೆಕ್ಟ್‍ಗೆ ಕೈ ಜೋಡಿಸ್ತಾರೆ ಅಂತ ಸುದ್ದಿಯಾಗಿದೆ. ಮಹೇಶ್ ಬಾಬುಗೆ ವಿಲನ್ನಾಗಿ ನಟಿಸ್ತಾರೆ ಎಂತಲೂ ನ್ಯೂಸ್ ಓಡಾಡ್ತಿದೆ.