ಕೋಮಲ್ ಅಭಿನಯದ ‘ನಮೋ ಭೂತಾತ್ಮ 2ಚಿತ್ರವು ಯಶಸ್ವಿಯಾಗಿ 25 ನೇ ದಿನದತ್ತ ಹೆಜ್ಜೆ ಹಾಕುತ್ತಿದೆ. ಆಗಸ್ಟ್ 4ರಂದು ಬಿಡುಗಡೆಯಾದ ಈ ಸಿನಿಮಾವನ್ನು ಪ್ರೇಕ್ಷಕರು ಮೆಚ್ಚುವುದರ ಜೊತೆಗೆ ಪರಭಾಷಾ ಚಿತ್ರಗಳ ಪೈಪೋಟಿಯ ನಡುವೆಯೂ ಚಿತ್ರವು 25 ದಿನಗಳನ್ನು ಪೂರೈಸಿದೆ ಎಂಬುದು ಚಿತ್ರತಂಡದ ಮಾತು.
ಕನ್ನಡ ಚಿತ್ರರಂಗದ ಜನಪ್ರಿಯ ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ನಿರ್ದೇಶನದ ಎರಡನೆಯ ಚಿತ್ರ ಇದಾಗಿದೆ. ಇದಕ್ಕೂ ಮೊದಲು ಮುರಳಿ ಕೆಲ ವರ್ಷಗಳ ಹಿಂದೆ ಕೋಮಲ್ ಅಭಿನಯದ ‘ನಮೋ ಭೂತಾತ್ಮ’ ಎಂಬ ರಿಮೇಕ್ ಚಿತ್ರವನ್ನು ನಿರ್ದೇಶನ ಮಾಡಿದ್ದರು. ‘ನಮೋ ಭೂತಾತ್ಮ 2’ ಚಿತ್ರಕ್ಕೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಚಿತ್ರದ ಕುರಿತು ಮಾತನಾಡುವ ಅವರು, ಚಿತ್ರವು 25 ದಿನಗಳ ಕಾಲ ಯಶಸ್ವಿ ಪ್ರದರ್ಶನವನ್ನು ಕಂಡಿದೆ. ಕೋವಿಡ್ ಸಂದರ್ಭದಲ್ಲಿ ಈ ಕಥೆಯನ್ನು ಮಾಡಿಟ್ಟುಕೊಂಡಿದ್ದೆ. ಕಳೆದ ವರ್ಷ ಇದೇ ಸಮಯಕ್ಕೆ ಚಿತ್ರದ ತಯಾರಿ ಶುರುವಾಯಿತು. ಈ ವರ್ಷ ಆಗಸ್ಟ್ ನಲ್ಲಿ ಚಿತ್ರ ಬಿಡುಗಡೆಯಾಗಿದೆ. ಚಿತ್ರ ನೋಡಿದವರೆಲ್ಲ ಮೆಚ್ಚಿಕೊಂದ್ದಾರೆ. ನಗಿಸುತ್ತಾ, ಹೆದರಿಸುತ್ತಾ ಇಂದು ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದು ಜನರಿಗೆ ಮೆಚ್ಚುಗೆಯಾಗಿದೆ. ಅದರಲ್ಲೂ ಚಿತ್ರದ ದ್ವಿತೀಯಾರ್ಧ ಮತ್ತು ಕ್ಲೈಮ್ಯಾಕ್ಸ್ ಭಾಗವನ್ನು ಎಲ್ಲರೂ ಬಹಳವಾಗಿ ಮೆಚ್ಚಿಕೊಂಡಿದ್ದಾರೆ ಎನ್ನುತ್ತಾರೆ ಮುರಳಿ.
ಸದ್ಯ ಮುರಳಿ ಅವರ ಬಳಿ ಇನ್ನೂ ಮೂರು ಕಥೆಗಳಿವೆಯಂತೆ. ‘ನಮೋ ಭೂತಾತ್ಮ 2’ ಚಿತ್ರದ ಕೊನೆಯಲ್ಲಿ ಚಿತ್ರ ಮುಂದುವರೆಯುತ್ತದೆ ಎಂಬ ವಿಷಯ ಗೊತ್ತಾಗುತ್ತದೆ. ‘ನಮೋ ಭೂತಾತ್ಮ 3’ ಮಾಡುವ ಯೋಚನೆ ಇದೆ. ಆದರೆ, ಸದ್ಯಕ್ಕಿಲ್ಲ. ಒಂದು ವರ್ಷದ ನಂತರ ಮಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲು ಇನ್ನೂ ಮೂರು ಕಥೆಗಳಿವೆ. ಎಲ್ಲಾ ವಿಭಿನ್ನ ಕಥೆಗಳು. ಈ ಪೈಕಿ ಒಂದು ಚಿತ್ರದ ಕೆಲಸಗಳು ಮುಂದಿನ ತಿಂಗಳಿನಿಂದ ಶುರುವಾಗುವ ಸಾಧ್ಯತೆ ಇದೆ ಎಂದಿದ್ದಾರೆ.