ಸುಮಾರು ಮೂರು ದಶಕಗಳಿಂದ ಕನ್ನಡದ ನೂರಾರು ಹೆಸರಾಂತ ಚಿತ್ರಗಳಿಗೆ ಕಥೆ ಬರೆದಿರುವ ಅಜಯ್ ಕುಮಾರ್ ಪುತ್ರ ಅರ್ಜುನ್ ‘ಗನ್ಸ್ ಅಂಡ್ ರೋಸಸ್’ ಸಿನಿಮಾದ ಮೂಲಕ ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅರ್ಜುನ್ ಅಭಿನಯದ ‘ಗನ್ಸ್ ಅಂಡ್ ರೋಸಸ್’ ಸಿನಿಮಾದ ಮುಹೂರ್ತ ಸಮಾರಂಭ ಇತ್ತೀಚೆಗೆ ಬೆಂಗಳೂರಿನ ಗವಿಪುರಂನಲ್ಲಿರುವ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಈ ವೇಳೆ ಚಿತ್ರರಂಗದ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಹೆಚ್. ಆರ್ ನಟರಾಜ್ ನಿರ್ಮಾಣದಲ್ಲಿ ಮೂಡಿಬರುತ್ತಿರುವ ‘ಗನ್ಸ್ ಅಂಡ್ ರೋಸಸ್’ ಸಿನಿಮಾಕ್ಕೆ ಶರತ್ ಕಥೆ, ಚಿತ್ರಕಥೆ ಬರೆದಿದ್ದಾರೆ. ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಕ್ರಿಯವಾಗಿರುವ, ಹತ್ತಾರು ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಶ್ರೀನಿವಾಸಮೂರ್ತಿ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದಾರೆ.
‘ಗನ್ಸ್ ಅಂಡ್ ರೋಸಸ್’ ಸಿನಿಮಾದಲ್ಲಿ ನಾಯಕ ಅರ್ಜುನ್ ಅವರಿಗೆ ಯಶ್ವಿಕಾ ನಿಷ್ಕಲ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಉಳಿದಂತೆ ಹರ್ಷಾರ್ಜುನ್, ಜೀವನ್ ರಿಷಿ ಮೊದಲಾದವರು ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ಸಿನಿಮಾದ ಹಾಡುಗಳಿಗೆ ಶಶಿಕುಮಾರ್ ಸಂಗೀತ ನೀಡುತ್ತಿದ್ದಾರೆ. ಚಿತ್ರಕ್ಕೆ ಜನಾರ್ದನ್ ಛಾಯಾಗ್ರಹಣ, ಸಂಜೀವ್ ರೆಡ್ಡಿ ಸಂಕಲನ ಹಾಗೂ ಥ್ರಿಲ್ಲರ್ ಮಂಜು ಸಾಹಸ ನಿರ್ದೇಶನವಿದೆ. ‘ಗನ್ಸ್ ಅಂಡ್ ರೋಸಸ್’ ಚಿತ್ರದಲ್ಲಿ ಅಂಡರ್ ವಲ್ಡ್ ಹಾಗೂ ಪ್ರೇಮಕಥೆ ಎರಡು ಇರುತ್ತದೆ. ಚಿತ್ರವನ್ನು ನಿಗದಿತ ಸಮಯಕ್ಕೆ ಮುಗಿಯಬೇಕು ಎಂದುಕೊಂಡಿರುವ ಚಿತ್ರತಂಡ, ಈ ವರ್ಷದ ಕೊನೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ಮಾಡಿಕೊಂಡಿದೆ.