ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಜೈಲರ್’ ಚಿತ್ರ ಹಿಟ್ ಲಿಸ್ಟ್ ಸೇರಿರುವುದು ನಿಮಗೆಲ್ಲ ಗೊತ್ತೆಯಿದೆ. ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಮೊದಲ ಸಾಲಲ್ಲಿ ನಿಂತಿರೋ ಜೈಲರ್, ಬೆಳ್ಳಿತೆರೆ ಮೇಲೆ ತನ್ನ ನಾಗಾಲೋಟ ಮುಂದುವರೆಸಿದ್ದು ಬಾಕ್ಸ್ ಆಫೀಸ್‍ನಲ್ಲಿ ಭರ್ಜರಿ ಬೆಳೆಯಾಗ್ತಿದೆ. ಬೆಳ್ಳಿಭೂಮಿ ಅಂಗಳದಲ್ಲಿ ಸಿನಿಮಾ 25 ದಿನ ಪೂರೈಸುವಷ್ಟರಲ್ಲಿ ಸುಮಾರು 600 ಕೋಟಿ ಕಲೆಕ್ಷನ್ ಆಗಿದ್ದು, ಅನ್ನದಾತ ಕಲಾನಿಧಿ ಮಾರನ್ ಫುಲ್ ಖುಷಿಯಲ್ಲಿದ್ದಾರೆ. ಅದೇ ಸಂತಸದಲ್ಲಿ ತಲೈವಾರನ್ನ ಭೇಟಿ ಮಾಡಿರುವ ಅವರು ಬೊಕ್ಕೆ ಕೊಟ್ಟು, ದುಬಾರಿ ಬೆಲೆಬಾಳುವ SUV BMW X7 ಕಾರ್ ನ ಗಿಫ್ಟ್ ಮಾಡಿದ್ದಾರೆ. ಇದೇ ವೇಳೆ ಚೆಕ್ ಹ್ಯಾಂಡೋವರ್ ಕೂಡ ಮಾಡಿದ್ದು, ಅದು 100 ಕೋಟಿ ರೂಪಾಯಿ ಚೆಕ್ ಎಂದು ಹೇಳಲಾಗ್ತಿದೆ.
ಅಷ್ಟಕ್ಕೂ, ಈ 100 ಕೋಟಿ ರೂಪಾಯಿ ಚೆಕ್ ಸುದ್ದಿಯಲ್ಲಿ ಎಷ್ಟು ಸತ್ಯವಿದೆಯೋ ಗೊತ್ತಿಲ್ಲ. ಆದರೆ, ಟ್ರೇಡ್ ಅನಲಿಸಿಸ್ಟ್ ಮನೋಬಲ ವಿಜಯಬಾಲನ್ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ರಜನಿಕಾಂತ್ ಹಾಗೂ ಕಲಾನಿಧಿ ಮಾರನ್ ಅವರು ಭೇಟಿಯಾಗಿರುವ ಹಾಗೂ ಚೆಕ್ ಹಸ್ತಾಂತರಿಸಲಾಗಿರುವ ಫೋಟೋಗಳನ್ನ ಅಪ್‍ಲೋಡ್ ಮಾಡಿದ್ದಾರೆ. ಸೂಪರ್ ಸ್ಟಾರ್ ರಜನಿಕಾಂತ್ ಅವ್ರನ್ನ ಜೈಲರ್ ನಿರ್ಮಾಪಕರು ಸನ್ ಪಿಕ್ಚರ್ ಆಫೀಸ್‍ಗೆ ಕರೆಸಿಕೊಂಡು ಪ್ರಾಫಿಟ್‍ನಲ್ಲಿ ಶೇರ್ ಕೊಟ್ಟಿದ್ದಾರೆ. ಸಿಟಿ ಯೂನಿಯನ್ ಬ್ಯಾಂಕ್‍ಗೆ ಸೇರಿದ 100 ಕೋಟಿ ಚೆಕ್‍ನ ಎನ್ವಲಪ್ ನಲ್ಲಿ ಹಾಕಿ ಪಡೆಯಪ್ಪನಿಗೆ ಒಪ್ಪಿಸಲಾಗಿದೆ ಎಂದು ಮನೋಬಲ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಅಂದ್ಹಾಗೇ,ಜೈಲರ್ ಚಿತ್ರದ ನಟನೆಗಾಗಿ ಶಿವಾಜಿಗೆ 110 ಕೋಟಿ ಸಂಭಾವನೆ ಫಿಕ್ಸ್ ಆಗಿತ್ತು. ಆ ಅಮೌಂಟ್‍ನ ಈ ಹಿಂದೆಯೇ ಕ್ಲಿಯರ್ ಮಾಡಿದ್ದ ಸನ್‍ಪಿಕ್ಚರ್ಸ್ ಮಾಲೀಕರು, `ಜೈಲರ್’ ಬ್ಲಾಕ್ ಬಸ್ಟರ್ ನಲ್ಲಿ ಬಾಬಾ ಪಾತ್ರ ಮಹತ್ವದ್ದು ಎಂದು ಮತ್ತೆ 100 ಕೋಟಿ ನೀಡಿದ್ದಾರಂತೆ. ಅಲ್ಲಿಗೆ ಟೈಗರ್ ಮುತ್ತುವೇಲ್ ಪಾಂಡಿಯನ್ ಜೇಬಿಗೆ 210 ಕೋಟಿ ಇಳಿದಂತಾಯ್ತು. ಮಾತ್ರವಲ್ಲ ಅತೀ ಹೆಚ್ಚು ಸಂಭಾವನೆ ಪಡೆಯುವ ಇಂಡಿಯಾದ ಏಕೈಕ ಸೂಪರ್ ಸ್ಟಾರ್ ಎನ್ನುವ ಕಿರೀಟವೂ ತಲೈವಾ ಮುಡಿಗೇರಿತು.
ನಿಮ್ಮೆಲ್ಲರಿಗೂ ಗೊತ್ತಿರುವ ಹಾಗೇ ರಜನಿಕಾಂತ್ ಇಂಡಿಯಾದ ಮೊದಲ ಸೂಪರ್ ಸ್ಟಾರ್. ಈಗ ರೆಮ್ಯೂನರೇಷನ್ ವಿಚಾರದಲ್ಲೂ ನಂ1 ಸ್ಥಾನ ಕಾಯ್ದಿರಿಸಿಕೊಂಡಿದ್ದಾರೆ. 72ನೇ ವಯಸ್ಸಲ್ಲೂ ಬಾಕ್ಸ್ ಆಫೀಸ್‍ನಲ್ಲಿ ಹಿಡಿತ ಸಾಧಿಸಿದ್ದಾರೆ. 200 ರಿಂದ 250 ಕೋಟಿ ಬಂಡವಾಳ ಹೂಡಿದ ನಿರ್ಮಾಪಕರಿಗೆ ಡಬ್ಬಲ್ ಕಲೆಕ್ಷನ್ ಮಾಡ್ಕೊಟ್ಟು ಸೇಫ್ ಝೋನ್ ಅಲ್ಲ ಸಕ್ಸಸ್ ಝೋನ್‍ಗೆ ಕಳಿಸಿದ್ದಾರೆ. ಇಂತಹದ್ದೊಂದು ಸಕ್ಸಸ್‍ನ ಹಿಂದೆ ಸಾವಿರಾರು ಜನ ಕೆಲಸ ಮಾಡಿದ್ದಾರೆ. ಆದರೆ,`ಜೈಲರ್’ ಮುನ್ನಡೆಸಿದ ಮಹಾನಾಯಕ ಶಿವಾಜಿ ದಿ ಬಾಸ್ ಆಗಿರೋದ್ರಿಂದ `ಜೈಲರ್’ ಯಶಸ್ಸಿನ ಕೀರ್ತಿ ಮತ್ತು ಕಿರೀಟ ಬಾಬಾಗೆ ಸಲ್ಲಬೇಕು.ಒಟ್ನಲ್ಲಿ ಜೈಲರ್ ಸಕ್ಸಸ್ ಯಾತ್ರೆ ಮುಂದುವರೆದಿದೆ. ನೆಲ್ಸನ್ ದಿಲೀಪ್ ಕುಮಾರ್ ಸಾರಥ್ಯದ `ಜೈಲರ್’ ದಿಗ್ವಿಜಯ ಸಾಧಿಸಿ ಹೊಸ ಹೊಸ ದಾಖಲೆ ಬರೆಯುತ್ತಿದೆ.