ತೆಲುಗಿನ ‘ಮಗಧೀರ’, ‘ಬಾಹುಬಲಿ’, ‘ಆರ್ ಆರ್ ಆರ್’ ದಂತಹ ಸೂಪರ್ ಹಿಟ್ ಚಿತ್ರಗಳ ಕಥೆಗಾರ ವಿ. ವಿಜಯೇಂದ್ರ ಪ್ರಸಾದ್ ಬಗ್ಗೆ ಬಹುತೇಕರಿಗೆ ಗೊತ್ತೇ ಇದೆ.ತಮ್ಮ ಕಥೆಯ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದಿರುವ, ಖ್ಯಾತ ನಿರ್ದೇಶಕ ಎಸ್. ಎಸ್ ರಾಜಮೌಳಿ ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಈಗ ಕನ್ನಡದಲ್ಲಿ ನಟ ಕಿಚ್ಚ ಸುದೀಪ್ ಸಿನಿಮಾಕ್ಕೆ ಸ್ಕ್ರಿಪ್ಟ್ ಸೂಪರ್ ವೈಸರ್ ಆಗಲಿದ್ದಾರೆ.
ಹೌದು, ‘ಆರ್ ಸಿ ಸ್ಟುಡಿಯೋಸ್’ ಸಂಸ್ಥೆಯ ಚೊಚ್ಚಲ ಚಿತ್ರಕ್ಕೆ ವಿ. ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಸೂಪರ್ ವೈಸ್ ಮಾಡಿದ್ದು, ಈ ಚಿತ್ರಕ್ಕೆ ಆರ್. ಚಂದ್ರು ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಈಗಾಗಲೇ ಈ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಸುದೀಪ್ ಅವರೊಂದಿಗೆ ಅಭಿನಯಿಸಲಿರುವ ಇತರ ಕಲಾವಿದರು, ತಂತ್ರಜ್ಞರ ಆಯ್ಕೆ ನಡೆಯುತ್ತಿದೆ.
ನಿರ್ದೇಶಕ ಆರ್. ಚಂದ್ರು ಮತ್ತು ‘ಆರ್ ಸಿ ಸ್ಟುಡಿಯೋಸ್’ ಈ ಚಿತ್ರದ ಶೀರ್ಷಿಕೆ ಬಿಡುಗಡೆಗೊಳಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಕಿಚ್ಚನ ಹುಟ್ಟುಹಬ್ಬವಾದ ಸೆಪ್ಟೆಂಬರ್ 2 ರಂದು ಈ ಸಿನಿಮಾದ ಟೈಟಲ್ ಅಧಿಕೃತವಾಗಿ ಘೋಷಣೆಯಾಗಲಿದೆ.