ನಿರ್ದೇಶಕ ನಂದಕಿಶೋರ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹು ನಿರೀಕ್ಷಿತ ‘ವೃಷಭ’ ಚಿತ್ರದ ಮೊದಲ ಹಂತದ ಚಿತ್ರೀಕರಣ ಸದ್ದಿಲ್ಲದೆ ಮುಕ್ತಾಯವಾಗಿದೆ. ‘ವೃಷಭ’ ಚಿತ್ರದ ಚಿತ್ರೀಕರಣ ಜುಲೈ ತಿಂಗಳ ಕೊನೆವಾರ ಮೈಸೂರಿನಲ್ಲಿ ಪ್ರಾರಂಭವಾಗಿತ್ತು. ಈ ಚಿತ್ರೀಕರಣದಲ್ಲಿ ಮೋಹನ್ ಲಾಲ್, ರೋಶನ್ ಮೇಕಾ, ಶನಾಯ ಕಪೂರ್, ಶ್ರೀಕಾಂತ್ ಮೇಕಾ, ರಾಗಿಣಿ ದ್ವಿವೇದಿ ಮುಂತಾದವರು ಪಾಲ್ಗೊಂಡಿದ್ದರು.
ಸುಮಾರು ಒಂದು ತಿಂಗಳ ಕಾಲ ಮೈಸೂರಿನಲ್ಲಿ ‘ವೃಷಭ’ ಸಿನಿಮಾದ ಚಿತ್ರೀಕರಣ ನಡೆಸಲಾಗಿದ್ದು, ಈ ಚಿತ್ರೀಕರಣದಲ್ಲಿ ಸಿನಿಮಾದಲ್ಲಿ ಬರುವ ಬೃಹತ್ ಆ್ಯಕ್ಷನ್ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
ಹಾಲಿವುಡ್ ನ ಜನಪ್ರಿಯ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಗುರುತಿಸಿಕೊಂಡಿರುವ ನಿಕ್ ಥರ್ಲೋ ಈ ಚಿತ್ರಕ್ಕೆ ಕೆಲಸ ಮಾಡುತ್ತಿರುವುದು ಒಂದು ವಿಶೇಷತೆಯಾದರೆ, ‘ಬಾಹುಬಲಿ’, ‘ಪುಲಿಮುರುಗನ್’, ‘ಶಿವಾಜಿ – ದಿ ಬಾಸ್’, ‘ಎಂದಿರನ್’, ‘ಪುಷ್ಪ – ದಿ ರೈಸ್’ ಸೇರಿದಂತೆ ಹಲವು ಜನಪ್ರಿಯ ಚಿತ್ರಗಳಿಗೆ ಕೆಲಸ ಮಾಡಿರುವ ಭಾರತೀಯ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಾದ ಪೀಟರ್ ಹೇನ್ಸ್ ಈ ಚಿತ್ರದ ಸಾಹಸ ದೃಶ್ಯಗಳನ್ನು ಸಂಯೋಜಿಸುತ್ತಿದ್ದಾರೆ. ಚಿತ್ರದ ಕುರಿತು ಮಾತನಾಡುವ ನಿರ್ದೇಶಕ ನಂದಕಿಶೋರ್, ‘ಮೊದಲ ಹಂತದ ಚಿತ್ರೀಕರಣದಲ್ಲಿ ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚಿನದನ್ನು ಸಾಧಿಸಿದ ಖುಷಿ ನಮಗಿದೆ. ‘ವೃಷಭ’ ಚಿತ್ರವು ಭಾರತದ ಅತೀ ದೊಡ್ಡ ಆಕ್ಷನ್ ಚಿತ್ರವಾಗಿ ಮೂಡಿಬರಲಿದೆ’ ಎಂದು ಹೇಳಿದ್ದಾರೆ.