ನಟ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಶನ್ ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾವಾಗಿರುವ ʼಸಲಾರ್ʼ ರಿಲೀಸ್ ಮಾಸ್ ಆಡಿಯನ್ಸ್ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಚಿತ್ರತಂಡ ಈಗಾಗಲೇ ಅನೌನ್ಸ್ ಮಾಡಿರುವಂತೆ, ‘ಸಲಾರ್’ ಸಿನಿಮಾ ಇದೇ ಸೆಪ್ಟೆಂಬರ್ 28ಕ್ಕೆ ಅದ್ದೂರಿಯಾಗಿ ಬಿಡುಗಡೆಯಾಗಬೇಕಿತ್ತು. ಇನ್ನೇನು ಸೆಪ್ಟೆಂಬರ್ ತಿಂಗಳು ಬಂದಿದ್ದು, ‘ಸಲಾರ್’ ಸಿನಿಮಾ ಬಿಡುಗಡೆಯಾಗಬೇಕು ಎನ್ನುವಷ್ಟರಲ್ಲಿ, ಚಿತ್ರತಂಡದ ಕಡೆಯಿಂದ ಅಭಿಮಾನಿಗಳಿಗೆ ಬೇಸರವಾಗುವಂತ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ‘ಸಲಾರ್’ ಸಿನಿಮಾ ಸೆಪ್ಟೆಂಬರ್ 28 ರಂದು ಬಿಡುಗಡೆಯಾಗುತ್ತಿಲ್ಲ.
ಇನ್ನೇನು ‘ಸಲಾರ್’ ಸಿನಿಮಾ ತೆರೆಗೆ ಬರಬೇಕು ಎನ್ನುವಾಗಲೇ, ಇದೀಗ ಸಿನಿ ಪ್ರೇಕ್ಷಕರಿಗೆ ʼಸಲಾರ್ʼ ಚಿತ್ರತಂಡ ಶಾಕಿಂಗ್ ನ್ಯೂಸ್ ನೀಡಿದೆ. ಇದೀಗ ಸಿನಿಮಾದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ ಎನ್ನಲಾಗಿದೆ. ಸಿನಿಮಾ ಟ್ರೇಡ್ ವಿಷ್ಲೇಶಕ ತರಣ್ ಆದರ್ಶ್ ಅವರು ಈ ಬಗ್ಗೆ ಟ್ವೀಟ್ ಮಾಡಿದ್ದು “ಸಲಾರ್” ಸಿನಿಮಾ ಸೆ.28 ರಂದು ಬಿಡುಗಡೆ ಆಗುತ್ತಿಲ್ಲ. ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಇನ್ನು ಬಾಕಿ ಇರುವ ಕಾರಣದಿಂದ ಸಿನಿಮಾ ನವೆಂಬರ್ ತಿಂಗಳಿನಲ್ಲಿ ರಿಲೀಸ್ ಆಗಲಿದೆ. ಹೊಸ ರಿಲೀಸ್ ಡೇಟ್ ಶೀಘ್ರದಲ್ಲಿ ಅನೌನ್ಸ್ ಆಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ತರಣ್ ಅವರ ಟ್ವೀಟ್ ವೈರಲ್ ಆಗಿದ್ದು, ʼಸಲಾರ್ʼ ಹೊಸ ರಿಲೀಸ್ ಡೇಟ್ ಗಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಆದರೆ ಈ ಬಗ್ಗೆ ಸಿನಿಮಾ ತಂಡ ಇನ್ನಷ್ಟೇ ಮಾಹಿತಿಯನ್ನು ಹಂಚಿಕೊಳ್ಳಬೇಕಿದೆ. ಪ್ಯಾನ್ ಇಂಡಿಯಾ ʼಸಲಾರ್ʼ ನಲ್ಲಿ ಪೃಥ್ವಿರಾಜ್ ಸುಕುಮಾರನ್ ಶ್ರುತಿ ಹಾಸನ್, ಜಗಪತಿ ಬಾಬು, ತಿನ್ನು ಆನಂದ್ ಮತ್ತು ಶ್ರೀಯಾ ರೆಡ್ಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ”ಸಲಾರ್: ಭಾಗ 1” ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.