ಇಂಡಸ್ ಹರ್ಬ್ಸ್’ನ ಟಿ. ಸಿ. ರವೀಂದ್ರ ತುಂಬರಮನೆ ಇವರು ನಿರ್ಮಿಸಿ, ರಮೇಶ್ ಬೇಗಾರ್ ರಚಿಸಿ ನಿರ್ದೇಶಿಸಿರುವ ‘ಜಲಪಾತ’ ಸಿನಿಮಾದಲ್ಲಿ ನಟ ಪ್ರಮೋದ್ ಶೆಟ್ಟಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮೋದ್ ಪಾತ್ರದ ಲುಕ್ ನ ಪೋಸ್ಟರ್ ನ್ನು ಅವರ ಧರ್ಮಪತ್ನಿ ನಟಿ , ನಿರ್ಮಾಪಕಿ ಸುಪ್ರೀತಾ ಶೆಟ್ಟಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ಗಂಡನ ಹೊಸ ಅವತಾರವನ್ನು ಹೆಂಡತಿ ಜನರಿಗೆ ತೋರಿಸಿದ ಅಪರೂಪದ ಆಪ್ತ ವಿದ್ಯಮಾನ ಇದಾಗಿದೆ. ಈ ಸಂದರ್ಭ ಸುಪ್ರೀತಾ ಶೆಟ್ಟಿ ಮಾತನಾಡಿ, ‘ಪ್ರಮೋದ್ ಮೊದಲಿನಿಂದಲೂ ವಿಭಿನ್ನ ಪಾತ್ರಗಳು ಮತ್ತು ಹೊಸಬರಿಗೆ ಬೆಂಬಲಿಸುವುದನ್ನು ಬಯಸುವವರು. ಅದರಂತೆ ‘ಜಲಪಾತ’ದ ಈ ಪೋಸ್ಟರ್ ಏನೋ ವಿಭಿನ್ನತೆ ಇದೆ ಎಂಬುದನ್ನು ಬಲು ಸೊಗಸಾಗಿ ತೋರಿಸಿದೆ. ಪ್ರಮೋದ್ ಲುಕ್ ಭರ್ಜರಿಯಾಗಿದ್ದು ಆ ಪಾತ್ರ ಮತ್ತು ಸಿನಿಮಾ ನೋಡಲು ಕಾತುರಳಾಗಿದ್ದೇನೆ’ ಎಂದಿದ್ದಾರೆ.
‘ಜಲಪಾತ’ ಸಿನಿಮಾದಲ್ಲಿ ರಜನೀಶ್ ನಾಯಕನಾಗಿ ನಾಗಶ್ರೀ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ಸಾದ್ವಿನಿ ಕೊಪ್ಪ ಸಂಗೀತ ಸಂಯೋಜಿಸಿದ್ದು, ಶಶೀರ ಛಾಯಾಗ್ರಹಣ, ಅವಿನಾಶ್ ಸಂಕಲನವಿದೆ. ‘ಜಲಪಾತ’ ಸಿನಿಮಾವನ್ನು ಇದೇ ಸೆಪ್ಟೆಂಬರ್ ನಲ್ಲಿ ತೆರೆಗೆ ತರುವ ಯೋಜನೆಯಲ್ಲಿದೆ.