ಇಂದಿನ ಯುವಕರು ಅವರ ಲೈಫ್ ಸ್ಟೈಲ್ ಕುರಿತಾದ ಕಥಾಹಂದರ ಹೊಂದಿರುವಂತಹ ಸಿನಿಮಾ. ‘ಕ್ರೇಜಿ ಕೀರ್ತಿ’’. ‘ಪ್ರಿಯ ಬಾಲಾಜಿ ಪ್ರೊಡಕ್ಷನ್ಸ್’ ಮೂಲಕ ಬಾಲಾಜಿ ಮಾಧವ ಶೆಟ್ಟಿ ಈ ಸಿನಿಮಾವನ್ನು ನಿರ್ಮಿಸಿ, ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಈ ‘ಕ್ರೇಜಿ ಕೀರ್ತಿ’’ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರತಂಡ ಸಿನಿಮಾದ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು.
‘ಇದೊಂದು ಯುವಜನತೆಯ ಮೇಲೆ ಮಾಡಿರುವ ಸಿನಿಮಾ. ಕಾಲೇಜಿನ ವಿದ್ಯಾರ್ಥಿಗಳ ಲೈಫ್ ಸ್ಟೈಲ್ ಕುರಿತ ಕಥೆ ಇದೆ. ಒಂದೊಳ್ಳೆಯ ರೊಮ್ಯಾಂಟಿಕ್ ಕಥಾಹಂದರ ಸಿನಿಮಾದಲ್ಲಿದೆ. ಮನಸ್ಸಿಗೆ ಇಷ್ಟವಾಗುವಂತಹ ಹಾಡುಗಳು ಸಿನಿಮಾದ ಪ್ಲಸ್. ಆದಷ್ಟು ಬೇಗ ಈ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲಿದ್ದೇವೆ’ ಎಂಬುದು ‘ಕ್ರೇಜಿ ಕೀರ್ತಿ’’ ಸಿನಿಮಾದ ನಿರ್ದೇಶಕ ಕಂ ನಿರ್ಮಾಪಕ ಬಾಲಾಜಿ ಮಾಧವ ಶೆಟ್ಟಿ ಮಾತು.
ನವನಟ ಅಭಿಲಾಶ್ ಈ ಸಿನಿಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ‘ಇಲ್ಲಿ ಸಾಕಷ್ಟು ಟ್ವಿಸ್ಟ್ ಗಳಿವೆ. ಇದು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲ, ಎಲ್ಲಾ ವರ್ಗದವರು ನೋಡಬಹುದಾದ ಸಿನಿಮಾ. ಮನರಂಜನೆಗೆ ಇಲ್ಲಿ ಸಾಕಷ್ಟು ಜಾಗವಿದೆ. ಕ್ರೇಜಿ ಹುಡುಗಿ ಏನೆಲ್ಲಾ ಮಾಡುತ್ತಾಳೆ ಎಂಬುದನ್ನು ಸಿನಿಮಾದಲ್ಲೇ ನೋಡಬೇಕು’ ಎಂಬುದು ನಾಯಕ ನಟ ಅಭಿಲಾಶ್ ಮಾತು.
‘ಕ್ರೇಜಿ ಕೀರ್ತಿ’’ ಸಿನಿಮಾದಲ್ಲಿ ನಾಯಕ ಅಭಿಲಾಶ್ ಗೆ ನಾಯಕಿಯರಾಗಿ ಸಾರಿಕಾ ರಾವ್, ರಿಶಾ ಗೌಡ ಜೋಡಿಯಾಗಿದ್ದಾರೆ. ಉಳಿದಂತೆ ರಂಗಾಯಣ ರಘು, ಪದ್ಮಜಾ ರಾವ್, ಪ್ರಕಾಶ್ ಶೆಣೈ, ಆಶಾ ಸುಜಯ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಈ ಸಿನಿಮಾದಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಮನೋಹರ ಛಾಯಾಗ್ರಹಣ, ಲಕ್ಷ್ಮಿನಾರಾಯಣ ರೆಡ್ಡಿ ಸಂಕಲನವಿದೆ. ಸದ್ಯ ಟ್ರೇಲರ್ ಮೂಲಕ ಹೊರಬಂದಿರುವ ‘ಕ್ರೇಜಿ ಕೀರ್ತಿ’ ಸಿನಿಮಾವನ್ನು ಇದೇ ನವೆಂಬರ್ ವೇಳೆಗೆ ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.