ಕನ್ನಡದ ಮೇರು ಕಲಾವಿದರಾದ ಡಾ. ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಸೇರಿದಂತೆ ಅನೇಕ ಖ್ಯಾತ ನಟರ ಚಿತ್ರಗಳನ್ನು ನಿರ್ದೇಶಿಸಿರುವ ಹೆಸರಾಂತ ನಿರ್ದೇಶಕ ಎಸ್. ನಾರಾಯಣ್ ಈಗ ನವ ನಟ ಶ್ರೇಯಸ್ ಮಂಜು ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ.
ಎಸ್. ನಾರಾಯಣ್ ನಿರ್ದೇಶನದ ಮತ್ತು ಶ್ರೇಯಸ್ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ ‘ಒಂದ್ಸಲ ಮೀಟ್ ಮಾಡೋಣ’ ಎಂದು ಟೈಟಲ್ ಇಡಲಾಗಿದೆ. ಈಗಾಗಲೇ ಸದ್ದಿಲ್ಲದೆ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಈ ಸಿನಿಮಾದ ಮುಹೂರ್ತವನ್ನು ನೆರವೇರಿಸಿದೆ.ಸಿನಿಮಾದಲ್ಲಿ ಶ್ರೇಯಸ್ ಮಂಜುಗೆ ನಾಯಕಿಯಾಗಿ ಬೃಂದಾ ಆಚಾರ್ ನಟಿಸುತ್ತಿದ್ದಾರೆ. ತಾರಾ ಅನುರಾಧ, ಶರತ್ ಲೋಹಿತಾಶ್ವ, ಸಾಧುಕೋಕಿಲ, ಪ್ರಮೋದ್ ಶೆಟ್ಟಿ, ಕಲ್ಯಾಣಿ, ರಂಗಾಯಣ ರಘು, ಪಾವಗಡ ಮಂಜು, ಜಯರಾಮ್, ಸುಜಯ್ ಶಾಸ್ತ್ರಿ, ಗಿರಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
‘ಈಶಾ ಪ್ರೊಡಕ್ಷನ್ಸ್’ ಲಾಂಛನದಲ್ಲಿ ಬಿ. ಪಿ. ತ್ಯಾಗರಾಜ್ ಅರ್ಪಿಸುತ್ತಿರುವ ಈ ಚಿತ್ರವನ್ನು ಕೆ. ಮಂಜು ಹಾಗೂ ರಮೇಶ್ ಯಾದವ್ ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಎಸ್. ನಾರಾಯಣ್ ಚಿತ್ರಕಥೆ, ಸಂಭಾಷಣೆ ಬರೆದು ಗೀತರಚನೆ ಮಾಡಿರುವ ಈ ಚಿತ್ರಕ್ಕೆ ಜಸ್ಸಿ ಗಿಫ್ಟ್ ಸಂಗೀತ ನೀಡುತ್ತಿದ್ದಾರೆ. ಕುಮಾರ್ ಗೌಡ ಛಾಯಾಗ್ರಹಣ, ಶಿವಪ್ರಸಾದ್ ಯಾದವ್ ಸಂಕಲನ, ಅರ್ಜುನ್ ಸಾಹಸ ನಿರ್ದೇಶನ, ಸಂತು ನೃತ್ಯ ನಿರ್ದೇಶನ ಹಾಗೂ ಆನಂದ್ ಕಲಾ ನಿರ್ದೇಶನ ‘ಒಂದ್ಸಲ ಮೀಟ್ ಮಾಡೋಣ’ ಚಿತ್ರಕ್ಕಿದೆ. ಇದೊಂದು ಟ್ರಾವೆಲಿಂಗ್ ಲವ್ ಸ್ಟೊರಿ ಸಿನಿಮಾವಾಗಿದ್ದು, ಚಿಕ್ಕಮಗಳೂರು, ಸಕಲೇಶಪುರ, ವಿರಾಜಪೇಟೆ, ಕಣ್ಣೂರು, ಮೈಸೂರು, ಬೆಂಗಳೂರು, ಬೆಳಗಾವಿ ಹಾಗೂ ಗೋವಾ ಮುಂತಾದ ಕಡೆ ಈ ಸಿನಿಮಾದ ಚಿತ್ರೀಕರಣ ನಡೆಯಲಿದೆ.