ಕೆಲ ದಿನಗಳ ಹಿಂದಷ್ಟೇ ಟೈಟಲ್ ಬಿಡುಗಡೆ ಮಾಡಿದ್ದ ‘ಚಿನ್ನದ ಮಲ್ಲಿಗೆ ಹೂವೇ’ ಚಿತ್ರತಂಡ ಚಿತ್ರೀಕರಣಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದೆ. ಅದಕ್ಕೂ ಮೊದಲು, ಇತ್ತೀಚೆಗೆ ಮಂತ್ರಾಲಯದ ಶ್ರೀಗುರು ರಾಘವೇಂದ್ರ ಸ್ವಾಮಿಗಳ ಮೂಲ ಬೃಂದಾವನಕ್ಕೆ ತೆರಳಿದ್ದ ಚಿತ್ರತಂಡ ಅಲ್ಲಿಯೇ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿಸಿತು.
‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾದ ಸ್ಕ್ರಿಪ್ಟ್ ಪೂಜೆಯಲ್ಲಿ ವರನಟ ಡಾ. ರಾಜಕುಮಾರ್ ಅವರ ಪುತ್ರಿ ಶ್ರೀಮತಿ ಲಕ್ಷ್ಮೀ ಗೋವಿಂದ ರಾಜು, ಹಾಗೂ ಅಳಿಯ ಎಸ್. ಎ ಗೋವಿಂದ ರಾಜು, ‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾದ ನಾಯಕ ನಟ ಷಣ್ಮುಖ ಗೋವಿಂದ ರಾಜು, ನಿರ್ಮಾಪಕರಾದ ಶ್ವೇತಾ ಶೆಟ್ಟಿ, ನಿರ್ದೇಶಕರಾದ ನವಿಲುಗರಿ ನವೀನ್ ಪಿ. ಬಿ ಕಲಾವಿದರಾದ ಅನಿಲ್, ಲಲಿತ್ ಇನ್ನೂ ಅನೇಕರು ಪೂಜೆಯಲ್ಲಿ ಭಾಗವಹಿಸಿ, ಗುರುಗಳಿಂದ ಆಶೀರ್ವಾದ ಪಡೆದರು.
ಸದ್ಯ ‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾದ ಸ್ಕ್ರಿಪ್ಟ್ ಪೂಜೆ ನೆರವೇರಿಸಿರುವ ಚಿತ್ರತಂಡ, ಈ ಚಿತ್ರವನ್ನು ತೀರ್ಥಹಳ್ಳಿ, ಆಗುಂಬೆ, ಮಲೆನಾಡು, ಶಿವಮೊಗ್ಗ, ಬೆಂಗಳೂರು ಪ್ರದೇಶಗಳಲ್ಲಿ ಶೂಟಿಂಗ್ ಮಾಡಲು ಸಿದ್ದತೆ ಮಾಡಿಕೊಂಡಿದೆ. ‘ಚಿನ್ನದ ಮಲ್ಲಿಗೆ ಹೂವೇ’ ಸಿನಿಮಾಕ್ಕೆ ವಿ. ಆರ್ ಚಂದ್ರು ಹಾಗೂ ಪ್ರಮೋದ್ ಆರ್. ಛಾಯಾಗ್ರಹಣ, ಮಧು ತುಂಬಕೆರೆ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಪ್ರಣವ್ ಸತೀಶ್ ಸಂಗೀತ ಸಂಯೋಜಿಸುತ್ತಿದ್ದಾರೆ. ಇದೇ ಸೆಪ್ಟಂಬರ್ ಎರಡನೇ ವಾರದಿಂದ ಸಿನಿಮಾದಶೂಟಿಂಗ್ ಶುರುವಾಗಲಿದೆ ಎಂಬುದು ಚಿತ್ರತಂಡ ನೀಡಿರುವ ಮಾಹಿತಿ.