ಪ್ರಮೋದ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ‘ಜಲಂಧರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಇತ್ತೀಚೆಗೆ ನಡೆದ ಪ್ರಮೋದ್ ಶೆಟ್ಟಿ ಹುಟ್ಟುಹಬ್ಬದಂದು ‘ಜಲಂಧರ’ ಚಿತ್ರದ ಪೋಸ್ಟರ್ ಸಹ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯಲು ಯಶಸ್ವಿಯಾಗಿದೆ. ಸದ್ಯ ಚಿತ್ರೀಕರಣ ಮುಗಿಸಿರುವ ‘ಜಲಂಧರ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ಸಾಗಿದೆ.
‘ಸ್ಟೆಪ್ ಅಪ್ ಪಿಕ್ಚರ್ಸ್’ ಲಾಂಛನದಲ್ಲಿ ಮದನ್ ಎಸ್. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ವಿಷ್ಣು ವಿ. ಪ್ರಸನ್ನ ಚೊಚ್ಚಲ ನಿರ್ದೇಶನದ ‘ಜಲಂಧರ’ ಚಿತ್ರ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದೆ. ಕಾವೇರಿ ನದಿದಡದ ಮಧುವತ್ತಿ ಎಂಬ ಊರಿನಲ್ಲಿ ಈ ಚಿತ್ರದ ಕಥೆ ತೆರೆದುಕೊಳ್ಳುತ್ತದೆ. ಲೋಕೇಶ್ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ಮುತ್ತತ್ತಿ, ಬೆಂಗಳೂರಿನ ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.
ಇನ್ನು ‘ಜಲಂಧರ’ ಸಿನಿಮಾದಲ್ಲಿ ಪ್ರಮೋದ್ ಶೆಟ್ಟಿ ಅವರೊಂದಿಗೆ ಲೋಕೇಶ್ ಗೌಡ, ರಘು ರಮಣಕೊಪ್ಪ, ಬಾಲ ರಾಜವಾಡಿ, ರಿಶಿಕಾ ರಾಜ್, ಆರೋಹಿತ ಗೌಡ, ನವೀನ್ ಸಾಗರ್, ಪ್ರತಾಪ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಸರಿನ್ ರವೀಂದ್ರನ್ ಹಾಗೂ ವಿದ್ಯಾಶಂಕರ್ ಛಾಯಾಗ್ರಹಣ, ಜತಿನ್ ದರ್ಶನ್ ಸಂಗೀತ ನಿರ್ದೇಶನ ಹಾಗೂ ವೆಂಕಿ ಯು ಡಿ ವಿ ಸಂಕಲನವಿದೆ. ಇದೇ ವರ್ಷಾಂತ್ಯಕ್ಕೆ ‘ಜಲಂಧರ’ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.