ಈ ಹಿಂದೆ ‘ಭಿನ್ನ’, ‘ಡಿಯರ್ ಸತ್ಯ’ ಸಿನಿಮಾಗಳನ್ನು ನಿರ್ಮಿಸಿರುವ ‘ಪರ್ಪಲ್ ರಾಕ್’ ಸಂಸ್ಥೆಯ ಮೂರನೇ ನಿರ್ಮಾಣದ ‘ಲೈನ್ ಮ್ಯಾನ್’ ಸಿನಿಮಾ ಬಿಡಗಡೆಗೆ ಸಿದ್ದವಾಗಿದೆ. ಈ ಹಿಂದೆ ‘ಟಕ್ಕರ್ ಹಾಗೂ ‘ರನ್ ಆಂಟೋನಿ’ ಚಿತ್ರಗಳನ್ನು ನಿರ್ದೇಶಿಸಿದ್ದ ರಘು ಶಾಸ್ತ್ರಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಗ್ರಾಮೀಣ ಭಾಗಗಳಲ್ಲಿ ಪ್ರತಿನಿತ್ಯ ಬೀದಿ ದೀಪ ಹಾಕುವ, ಅರಿಸುವ ಹಾಗೂ ವಿದ್ಯುತ್ ಸಂಬಂಧಿಸಿ ತೊಂದರೆ ಸರಿಪಡಿಸುವ ‘ಲೈನ್ ಮ್ಯಾನ್’ ಸುತ್ತ ಈ ಸಿನಿಮಾದ ಕಥೆ ನಡೆಯಲಿದೆ. ಯುವ ನಟ ತ್ರಿಗುಣ್ ಸಿನಿಮಾದಲ್ಲಿ ‘ಲೈನ್ ಮ್ಯಾನ್’ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಾಜಲ್ ಕುಂದರ್ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದು, ಉಳಿದಂತೆ ಹಿರಿಯ ನಟಿ ಬಿ. ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಮೊದಲಾದವರು ಸಿನಿಮಾದ ಇತರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಈಗಾಗಲೇ ಶೂಟಿಂಗ್ ಮತ್ತು ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿ ಫಸ್ಟ್ ಕಾಪಿ ಜೊತೆ ಹೊರಬಂದಿರುವ ‘ಲೈನ್ ಮ್ಯಾನ್’ ಸಿನಿಮಾದ ಬಿಡುಗಡೆಗೆ ಸೆನ್ಸಾರ್ ಮಂಡಳಿಯಿಂದಲೂ ಗ್ರೀನ್ ಸಿಗ್ನಲ್ ಸಿಕ್ಕಿದೆ. ಇತ್ತೀಚೆಗೆ ‘ಲೈನ್ ಮ್ಯಾನ್’ ಸಿನಿಮಾವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ, ಸಿನಿಮಾಕ್ಕೆ ‘ಯು’ ಸರ್ಟಿಫಿಕೇಟ್ ನೀಡಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಇದೇ ಅಕ್ಟೋಬರ್ ಮೊದಲ ವಾರ ‘ಲೈನ್ ಮ್ಯಾನ್’ ಸಿನಿಮಾವನ್ನು ತೆರೆಗೆ ತರಲು ಪ್ಲಾನ್ ಹಾಕಿಕೊಂಡಿದೆ.