‘ಶ್ರೀಕೃಷ್ಣ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಮೂಡಿ ಬಂದ ‘ತಿಮ್ಮನ ಮೊಟ್ಟೆಗಳು’ ಚಿತ್ರ ಬಿಡುಗಡೆಗೆ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾವನ್ನು ನೋಡಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ‘ತಿಮ್ಮನ ಮೊಟ್ಟೆಗಳು’ ಸಿನಿಮಾಕ್ಕೆ ಯಾವುದೇ ಕಟ್ ಅಥವಾ ಮ್ಯೂಟ್ ಹೇಳದೆ ‘ಯು’ ಸರ್ಟಿಫಿಕೇಟ್ ನೀಡಿದೆ.
ಆದರ್ಶ ಅಯ್ಯಂಗಾರ್ ನಿರ್ಮಾಣದಲ್ಲಿ ತಯಾರಾದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ರಕ್ಷಿತ್ ತೀರ್ಥಹಳ್ಳಿ ನಿರ್ದೇಶನವಿದೆ. ನಿರ್ದೇಶಕರೆ ಬರೆದ ‘ಕಾಡಿನ ನೆಂಟರು’ ಎಂಬ ಕಥಾ ಸಂಕಲನದಿಂದ ಆಯ್ದ ಕಥೆ ‘ತಿಮ್ಮನ ಮೊಟ್ಟೆಗಳು’ ಹೆಸರಿನಲ್ಲಿ ಸಿನಿಮಾವಾಗಿದೆ.
ಚಿತ್ರದಲ್ಲಿ ಶೃಂಗೇರಿಯ ರಂಗ ಪ್ರತಿಭೆ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಶೃಂಗೇರಿ ರಾಮಣ್ಣ, ರಾಘು ರಾಮನಕೊಪ್ಪ, ಪ್ರಗತಿ ಪ್ರಭು, ಮಾಸ್ಟರ್ ಹರ್ಷ, ವಿನಯ್ ಕಣಿವೆ ಮುಂತಾದವರು ನಟಿಸಿದ್ದಾರೆ.
ಚಿತ್ರಕ್ಕೆ ಪ್ರವೀಣ್. ಎಸ್ ಛಾಯಾಗ್ರಹಣ, ಬಿ.ಎಸ್. ಕೆಂಪರಾಜ್ ಸಂಕಲನ ಹಾಗೂ ಹೇಮಂತ್ ಜೋಯ್ಸ್ ಸಂಗೀತವಿದೆ. ರಕ್ಷಿತ್ ತೀರ್ಥಹಳ್ಳಿ ಸಾಹಿತ್ಯ ಬರೆದಿರುವ ಮೂರು ಹಾಡುಗಳಿಗೆ ವಾಸುಕಿ ವೈಭವ್, ಐಶ್ವರ್ಯ ರಂಗರಾಜನ್, ಆದರ್ಶ್ ಅಯ್ಯಂಗಾರ್ ಮತ್ತು ಚಿನ್ಮಯಿ ಚಂದ್ರಶೇಖರ್ ದನಿಯಾಗಿದ್ದಾರೆ.
ಮನುಷ್ಯನ ನಂಬಿಕೆ ಮತ್ತು ಆತನ ಆಚರಣೆಗಳ ಮೇಲೆ ಕೇಂದ್ರೀಕೃತವಾಗಿರುವ ಕಥಾವಸ್ತುವನ್ನು ಚಿಕ್ಕಮಗಳೂರು ಮತ್ತು ಶಿವಮೊಗ್ಗದ ಸುತ್ತಲಿನ ಹಲವು ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.