ಸಾಫ್ಟ್ ವೇರ್ ಹಿನ್ನೆಲೆಯಿಂದ ಬಂದಿರುವ ಕೀರ್ತಿ ಶೇಖರ್ ಹಾಗೂ ವೈಶಾಖ್ ಪುಷ್ಪಲತಾರವರ ಚೊಚ್ಚಲ ಹೆಜ್ಜೆ ‘ಹೊಸ ದಿನಚರಿ’. ಒಂದಷ್ಟು ಕಿರುಚಿತ್ರಗಳನ್ನು ನಿರ್ಮಿಸಿದ್ದ ಕೀರ್ತಿ, ಹೊಸ ದಿನಚರಿ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಇವರಿಗೆ ವೈಶಾಖ್ ಕೂಡ ಸಾಥ್ ಕೊಟ್ಟಿದ್ದರು. ಇವರಿಬ್ಬರ ಸಾರಥ್ಯದಲ್ಲಿ ಮೂಡಿಬಂದಿದ್ದ ಈ ಸಿನಿಮಾ ಕಳೆದ ಡಿಸೆಂಬರ್ ನಲ್ಲಿ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿತ್ತು. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿದ್ದ, ‘ಹೊಸ ದಿನಚರಿ’ ಚಿತ್ರವೀಗ ಒಟಿಟಿಗೆ ಲಗ್ಗೆ ಇಟ್ಟಿದೆ.
ಇದೇ ಸೆಪ್ಟೆಂಬರ್ 4 (ಸೋಮವಾರ) ರಿಂದ ‘ಅಮೇಜಾನ್ ಪ್ರೈಮ್’ನಲ್ಲಿ ಈ ಸಿನಿಮಾ ಸ್ಕ್ರೀಮಿಂಗ್ ಆಗುತ್ತಿದೆ. ಎಲ್ಲರ ಜೀವನದಲ್ಲೂ ಪ್ರೀತಿ ಇದೇ ಇರುತ್ತದೆ. ಆದರೆ ಪ್ರೀತಿಸಿದ ವ್ಯಕ್ತಿ ಕೊನೆಯವರೆಗೂ ಇರುತ್ತಾರಾ? ಅವರಿಲ್ಲದೇ ಬೇರೊಬ್ಬರು ಜೀವನದಲ್ಲಿ ಬಂದಾಗ ಏನಾಗುತ್ತದೆ ಎಂಬ ಕಥಾಹಂದರ ‘ಹೊಸ ದಿನಚರಿ’ ಸಿನಿಮಾದಲ್ಲಿದೆ.
‘ಹೊಸ ದಿನಚರಿ’ ಸಿನಿಮಾಗೆ ಗಂಗಾಧರ್ ಸಾಲಿಮಠ, ಮೃತ್ಯುಂಜಯ ಶುಕ್ಲಾ ಹಾಗೂ ಅಲೋಕ್ ಚೌರಾಸಿಯಾ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ಬಾಬು ಹಿರಣ್ಣಯ್ಯ, ಅರುಣಾ ಬಾಲರಾಜ್, ದೀಪಕ್ ಸುಬ್ರಹ್ಮಣ್ಯ, ಚೇತನ್ ವಿಕ್ಕಿ, ಮಂದಾರ, ವರ್ಷ, ಶ್ರೀಪ್ರಿಯಾ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ವೈಶಾಖ್ ವರ್ಮಾ ಸಂಗೀತ, ಸಾಹಿತ್ಯ, ಅಶ್ವಿನ್ ಹೇಮಂತ್ ಹಿನ್ನೆಲೆ ಸಂಗೀತ, ರಂಜಿತ್ ಸೇತು ಸಂಕಲನ ಈ ಚಿತ್ರಕ್ಕಿದೆ. ಥಿಯೇಟರಿನಲ್ಲಿ ಹೊಸಬರ ‘ಹೊಸ ದಿನಚರಿ’ಯನ್ನು ಮಿಸ್ ಮಾಡಿಕೊಂಡಿದ್ದವರು ಈಗ ‘ಅಮೇಜಾನ್ ಪ್ರೈಮ್’ ನಲ್ಲಿ ಸ್ಟ್ರೀಮ್ ಆಗುತ್ತಿರುವ ಸಿನಿಮಾವನ್ನು ನೋಡಿ ಆನಂದಿಸಬಹುದು ಎಂದಿದೆ ಚಿತ್ರತಂಡ.