ಯುವನಟ ಪ್ರಶಾಂತ್ ನಾಯಕನಾಗಿ ಮತ್ತು ಹರ್ಷಿತಾ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ‘ಸೂರ್ಯ’ ಸಿನಿಮಾದ ಮೊದಲ ಟೀಸರ್ ಇತ್ತೀಚೆಗೆ ಬಿಡುಗಡೆಯಾಯಿತು. ನಿರ್ದೇಶಕ ಬಹದ್ದೂರ್ ಚೇತನ್ ‘ಸೂರ್ಯ’ ಸಿನಿಮಾದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಹಿರಿಯ ನಿರ್ದೇಶಕ ಬಿ. ಸುರೇಶ್ ಜೊತೆ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದ ಸಾಗರ್, ‘ಸೂರ್ಯ’ ಸಿನಿಮಾಕ್ಕೆ ಮೊದಲ ಬಾರಿಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಚಿತ್ರೀಕರಣದ ಕೊನೇಹಂತ ತಲುಪಿರುವ ‘ಸೂರ್ಯ’ ಸಿನಿಮಾವನ್ನು‘ನಂದಿ ಸಿನಿಮಾಸ್’ ಮೂಲಕ ಬಸವರಾಜ್ ಬೆಣ್ಣೆ ಹಾಗೂ ರವಿ ಬೆಣ್ಣೆ ಸಹೋದರರು ನಿರ್ಮಾಣ ಮಾಡುತ್ತಿದ್ದಾರೆ. ಪ್ರಶಾಂತ್, ಹರ್ಷಿಕಾ ಅವರೊಂದಿಗೆ ರವಿಶಂಕರ್, ಶೃತಿ, ಪ್ರಮೋದ್ ಶೆಟ್ಟಿ, ಟಿ. ಎಸ್. ನಾಗಾಭರಣ, ಬಲ ರಾಜವಾಡಿ, ಪ್ರಸನ್ನ ಮೊದಲಾದವರು ‘ಸೂರ್ಯ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಸೂರ್ಯ’ ಸಿನಿಮಾದ ಟೈಟಲ್ಲೇ ಹೇಳುವಂತೆ, ಸೂರ್ಯ ನಾಯಕನ ಹೆಸರು. ಆತ ತನ್ನ ಪ್ರೀತಿಗೋಸ್ಕರ ಯುದ್ದದ ರೀತಿಯಲ್ಲಿ ಸಮರ ಸಾರಿ ಅದನ್ನು ಹೇಗೆ ಉಳಿಸಿಕೊಳ್ಳುತ್ತಾನೆ ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಬೆಂಗಳೂರು, ಪೂಣಾ ಸುತ್ತಮುತ್ತ ಚಿತ್ರದ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದೆ. ಬಾಕಿಯಿರುವ ಚಿತ್ರೀಕರಣ ಇದೇ ಸೆಪ್ಟೆಂಬರ್ ಅಂತ್ಯದೊಳಗೆ ಪೂರ್ಣವಾಗಲಿದ್ದು, ನವೆಂಬರ್ ಕೊನೆ ಅಥವಾ ಡಿಸೆಂಬರ್ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಿದೆ ಎಂಬುದು ಚಿತ್ರತಂಡ ನೀಡುವ ಮಾಹಿತಿ.