2005 ರಲ್ಲಿ ತೆರೆಕಂಡ ‘ಬಾಯ್ ಫ್ರೆಂಡ್’ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ, ಬಳಿಕ ಒಂದಷ್ಟು ಚಿತ್ರಗಳಲ್ಲಿ ನಟಿಸಿ, ನಿರ್ದೇಶಿಸಿರುವ ರಾಮ್ ಜನಾರ್ಧನ್ ಈಗ ‘ಭಗೀರಥ’ ಎಂಬ ಹೊಸ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಈಗಾಗಲೇ ‘ಭಗೀರಥ’ ಸಿನಿಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಮುಹೂರ್ತವನ್ನು ನೆರವೇರಿಸಿದೆ.
‘ಸಾಯಿ ರಮೇಶ್ ಪ್ರೊಡಕ್ಷನ್’ ಲಾಂಛನದಲ್ಲಿ ಕೆ. ರಮೇಶ್ ಹಾಗೂ ಬಿ. ಭೈರಪ್ಪ ಮೈಸೂರು ‘ಭಗೀರಥ’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಬೆಂಗಳೂರಿನ ಗವಿಪುರಂನಲ್ಲಿರುವ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆಡೆದ ‘ಭಗೀರಥ’ ಸಿನಿಮಾದ ಮುಹೂರ್ತ ಸಮಾರಂಭದಲ್ಲಿ ಸಿನಿಮಾದ ಮೊದಲ ಸನ್ನಿವೇಶಕ್ಕೆ ಹಿರಿಯ ನಿರ್ದೇಶಕ ಸಾಯಿಪ್ರಕಾಶ್ ಆರಂಭ ಫಲಕ ತೋರಿದರು. ಸಿರಿ ಕನ್ನಡ ವಾಹಿನಿ ಮುಖ್ಯಸ್ಥರಾದ ರಾಜೇಶ್ ರಾಜಘಟ್ಟ ಕ್ಯಾಮೆರಾ ಚಾಲನೆ ಮಾಡಿದರು.
ಈ ಹಿಂದೆ ‘ಜಮಾನ’ ಚಿತ್ರದಲ್ಲಿ ನಟಿಸಿದ್ದ ಜಯಪ್ರಕಾಶ್ ಈ ಚಿತ್ರದಲ್ಲಿ ನಾಯಕನಾಗಿ ಉದ್ಯಮಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ನಟಿ ಚಂದನ ರಾಘವೇಂದ್ರ ನಾಯಕಿಯಾಗಿ ಪತ್ರಕರ್ತೆಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಸುಧಾ ಬೆಳವಾಡಿ, ಸಾಯಿಪ್ರಕಾಶ್, ಶಿವರಾಜ್ ಕೆ. ಆರ್ ಪೇಟೆ, ರವಿ ಕಾಳೆ, ಬಾಲ ರಾಜವಾಡಿ, ಸುರಭಿ ರವಿ, ನಯನ, ನಿಖಿತ ಮುಂತಾದವರು ಸಿನಿಮಾದ ಇತರ ತಾರಾಬಳಗದಲ್ಲಿದ್ದಾರೆ.
‘ಯಾವುದಾದರೂ ಒಂದು ಕೆಲಸವನ್ನು ಬಿಡದೆ ಸಾಧಿಸುವುದನ್ನು ‘ಭಗೀರಥ’ ಪ್ರಯತ್ನ ಎನ್ನುತ್ತಾರೆ. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ. ಇದರಲ್ಲಿ ಮನರಂಜನೆಯ ಜೊತೆಗೆ ಸಾಮಾಜಿಕ ಸಂದೇಶವಿದೆ’ ಎಂಬುದು ಚಿತ್ರತಂಡದ ಮಾತು. ಸದ್ಯ ಮುಹೂರ್ತ ನೆರವೇರಿಸಿರುವ ಚಿತ್ರತಂಡ ಸೆಪ್ಟೆಂಬರ್ ಎರಡನೇ ವಾರದಿಂದ ಹತ್ತನೇ ಮೈಸೂರಿನಲ್ಲಿ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಿದೆ.





