ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ ‘ಸಪ್ಲೇಯರ್ ಶಂಕರ’ ಚಿತ್ರದ ಎರಡನೇ ಹಾಡು ಇತ್ತೀಚೆಗೆ ಬಿಡುಗಡೆಯಾಗಿದೆ. ಪ್ರಮೋದ್ ಮರವಂತೆ ಬರೆದಿರುವ ‘ಮಾಡೊ ಕೆಲಸವ ನೀನು ಮರೆಸಿದೆ…’ ಎಂಬ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿಬಂದಿದ್ದು, ಆರ್. ಬಿ ಭರತ್ ಈ ಹಾಡಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಆನಂದ್ ಆಡಿಯೋ’ ಯೂ-ಟ್ಯೂಬ್ ಚಾನೆಲ್ ನಲ್ಲಿ ಈ ಲವ್ ಟ್ರ್ಯಾಕ್ ಬಿಡುಗಡೆಯಾಗಿದೆ.

‘ತ್ರಿನೇತ್ರ ಫಿಲಂಸ್’ ಲಾಂಛನದಲ್ಲಿ ಎಂ. ಚಂದ್ರಶೇಖರ್ ಹಾಗೂ ಎಂ. ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಸಪ್ಲೇಯರ್ ಶಂಕರ’ ಸಿನಿಮಾ ಬಾರ್ ಸಪ್ಲೇಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ನಿರ್ದೇಶಕ ರಂಜಿತ್ ಅವರೇ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್, ಬಾರ್ ಸಪ್ಲೇಯರ್ ಜೀವನದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.

ಈ ಹಿಂದೆ ‘ಗಂಟು ಮೂಟೆ’ ಮತ್ತು ‘ಟಾಮ್ & ಜೆರ್ರಿ’ ಚಿತ್ರಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ ‘ಸಪ್ಲೇಯರ್ ಶಂಕರ’ ನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೊತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಹಾಡು ಬಿಡುಗಡೆಯಾದ ಬಳಿಕ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ‘ಸಪ್ಲೇಯರ್ ಶಂಕರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದೆ. ಈ ವರ್ಷದ ಕೊನೆಗೆ ‘ಸಪ್ಲೇಯರ್ ಶಂಕರ’ ತೆರೆಯ ಮೇಲೆ ಬರಲು ರೆಡಿಯಾಗುತ್ತಿದ್ದಾನೆ.





