‘ಪೊಯೆಮ್ ಪಿಕ್ಚರ್ಸ್’ ಲಾಂಛನದಲ್ಲಿ ಎರಡು ವರ್ಷಗಳ ಹಿಂದೆ ತೆರೆಕಂಡಿದ್ದ ‘ನಾನು ಮತ್ತು ಗುಂಡ’ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ನಾಯಕ ಹಾಗೂ ನಾಯಿಯೊಂದರ ನಡುವಿನ ಅವಿನಾಭಾವ ಸಂಬಂಧದ ಕಥೆಯನ್ನು ಹೇಳುವ ಆ ಚಿತ್ರದಲ್ಲಿ ನಟ ಶಿವರಾಜ್ ಕೆ.ಆರ್. ಪೇಟೆ ಮತ್ತು ನಾಯಿಯ ಅದ್ಭುತ ಅಭಿನಯವಿತ್ತು.

‘ನಾನು ಮತ್ತು ಗುಂಡ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ರಘು ಹಾಸನ್ ಈಗ ಅದರ ಮುಂದುವರೆದ ಭಾಗವಾಗಿ ‘ನಾನು ಮತ್ತು ಗುಂಡ -2’ ಎಂಬ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ, ತೆಲುಗು, ಹಿಂದಿ ಸೇರಿ ಐದು ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ‘ನಾನು ಮತ್ತು ಗುಂಡ’ ಸಿನಿಮಾದಲ್ಲಿ ನಾಯಕ ಶಿವರಾಜ್ ಕೆ. ಆರ್. ಪೇಟೆ ಅವರ ಪಾತ್ರ ಮರಣ ಹೊಂದುತ್ತದೆ. ಈಗ ಬರುತ್ತಿರುವ ‘ನಾನು ಮತ್ತು ಗುಂಡ-2’ ಸಿನಿಮಾದಲ್ಲಿ ತನ್ನ ಮಾಲೀಕನನ್ನು ಕಳೆದುಕೊಂಡ ನಾಯಿ ಸಮಾಜದಲ್ಲಿ ಹೇಗೆ ಜೀವನ ನಡೆಸುತ್ತದೆ ಎಂಬುದನ್ನು ಭಾವನಾತ್ಮಕ ಕಥೆಯೊಂದಿಗೆ ಮನರಂಜನಾತ್ಮಕವಾಗಿ ಹೇಳಲಾಗುತ್ತಿದೆ ಎಂದಿದೆ ಚಿತ್ರತಂಡ.

ಈಗಾಗಲೇ ಮೈಸೂರು ಸುತ್ತಮುತ್ತ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು, ಸದ್ಯ ಸಿನಿಮಾದ ಚಿತ್ರೀಕರಣದ ಅಂತಿಮ ಘಟ್ಟಕ್ಕೆ ತಲುಪಿದೆ. ‘ನಾನು ಮತ್ತು ಗುಂಡ-2’ ಸಿನಿಮಾದ ಹಾಡುಗಳಿಗೆ ಆರ್. ಪಿ. ಪಟ್ನಾಯಕ್ ಸಂಗೀತ ಸಂಯೋಜನೆ, ರುತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತವಿದೆ. ಚಿತ್ರಕ್ಕೆ ತನ್ವಿಕ್ ಜಿ. ಛಾಯಾಗ್ರಹಣ, ಕೆ. ಎಂ. ಪ್ರಕಾಶ್ ಸಂಕಲನವಿದೆ. ಇದೇ ವರ್ಷಾಂತ್ಯಕ್ಕೆ ‘ನಾನು ಮತ್ತು ಗುಂಡ-2’ ಸಿನಿಮಾವನ್ನು ತೆರೆಗೆ ತರುವ ಯೋಚನೆಯಲ್ಲಿದೆ ಚಿತ್ರತಂಡ.





