ಈ ಹಿಂದೆ ರಾಜ್ಯ ಪ್ರಶಸ್ತಿ ವಿಜೇತ ‘ಕಾಲ್ಗೆಜ್ಜೆ’ ಎಂಬ ಸಿನಿಮಾವನ್ನು ನಿರ್ದೇಶಿಸಿದ್ದ ಎ. ಬಂಗಾರು ಈಗ ‘ಮಡಿಕೇರಿ’ ಎಂಬ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಇತ್ತೀಚೆಗೆ ಚಿತ್ರದ ಶೀರ್ಷಿಕೆ ಅನಾವರಣ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಹಿರಿಯ ನಿರ್ದೇಶಕ ಎಸ್. ಮಹೇಂದರ್ ತಮ್ಮ ಶಿಷ್ಯನ ನಿರ್ದೇಶನದ ‘ಮಡಿಕೇರಿ’ ಸಿನಿಮಾದ ಟೈಟಲ್ ಲಾಂಚ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದರು. ‘ಪರಮಹಸ್ತ ಪ್ರೊಡಕ್ಷನ್ಸ್’ ಮತ್ತು ‘ಶ್ರೀ ಬಾಲಾಜಿ ಸಿನಿ ಕಂಬೈನ್ಸ್’ ನಿರ್ಮಾಣದ ‘ಮಡಿಕೇರಿ’ ಚಿತ್ರಕ್ಕೆ ನಿರ್ದೇಶಕ ಎ. ಬಂಗಾರು ಕಥೆ, ಚಿತ್ರಕತೆ, ಸಂಭಾಷಣೆ, ಸಾಹಿತ್ಯವನ್ನೂ ರಚಿಸಿದ್ದಾರೆ. ಇದೊಂದು ಸಂಗೀತ ಪ್ರದಾನ ಸುಮಧುರ ದೃಶ್ಯಕಾವ್ಯವಾಗಿದ್ದು, ಮೂರು ಬೇರೆ ಬೇರೆ ಕುಟುಂಬದ ಟ್ರಾಕ್ ನಲ್ಲಿ ಸಿನಿಮಾದ ಕಥೆ ಸಾಗುತ್ತದೆ. ಹಿರಿಯ ನಟಿ ಸುಹಾಸಿನಿ ಸಿನಿಮಾದ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮನರಂಜನಾತ್ಮಕ ಕಥಾಹಂದರವುಳ್ಳ ಈ ಚಿತ್ರಕ್ಕೆ ಪೃಥ್ವಿ ಅಂಬರ್ ನಾಯಕರಾಗಿ, ಶಾಲಿನಿ ಭಟ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಅಚ್ಯುತಕುಮಾರ್, ಸುಧಾರಾಣಿ, ಅನು ಪ್ರಭಾಕರ್, ಭವಾನಿ ಪ್ರಕಾಶ್, ಶ್ರೀ ಶಂಭು, ಬಸು, ವಿನೋದ್ ಗೊಬ್ರಗಾಲ, ಸುಷ್ಮಿತಾ ಸೇರಿದಂತೇ ಸಾಕಷ್ಟು ಕಲಾವಿದರು ಅಭಿನಯಿಸುತ್ತಿದ್ದಾರೆ. ‘ಮಡಿಕೇರಿ’ ಸಿನಿಮಾದ ಟೈಟಲಿಗೆ ‘ಮಂಜು ಕರಗುವ ಮುನ್ನ’ ಎಂಬ ಅಡಿ ಬರಹವಿದೆ. ಸದ್ಯ ಈ ಸಿನಿಮಾದ ಪ್ರೀ-ಪ್ರೊಡಕ್ಷನ್ ಕೆಲಸಗಳು ಭರದಿಂದ ನಡೆಯುತ್ತಿದ್ದು, ಇದೇ ನವಂಬರ್ ಹೊತ್ತಿಗೆ ಚಿತ್ರದ ಮುಹೂರ್ತ ನಡೆಯಲಿದ್ದು, ಜೊತೆಗೆ ಶೂಟಿಂಗ್ ಕೂಡ ಶುರುವಾಗಲಿದೆ.





