ಕನ್ನಡ ಚಿತ್ರರಂಗದಲ್ಲಿ ಆಗಾಗ್ಗೆ ಹೊಸಪ್ರಯತ್ನಗಳು ನಡೆಯುತ್ತಲೇ ಇರುತ್ತದೆ. ಇದೀಗ ಅಂಥದ್ದೇ ಒಂದು ಪ್ರಯತ್ನವಾಗಿ, ಬಹುತೇಕ ಹೊಸತಂಡದಿಂದ 2 ಗಂಟೆ 38 ನಿಮಿಷಗಳ ಅವಧಿಯ ‘ಯಂಗ್ ಮ್ಯಾನ್’ ಎಂಬ ಚಿತ್ರ ನಿರ್ಮಾಣವಾಗಿದೆ. ಈ ಸಿನಿಮಾದ ವಿಶೇಷವೆಂದರೆ, ಸಿಂಗಲ್ ಟೇಕ್ ನಲ್ಲಿ ಇಡೀ ಸಿನಿಮಾವನ್ನು ಚಿತ್ರೀಕರಣ ಮಾಡಲಾಗಿದೆ. ಈ ಹಿಂದೆ ಕೆಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದ ಮುತ್ತುರಾಜ್ ಮೊದಲ ಬಾರಿಗೆ ಈ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ. ಚೊಚ್ಚಲ ನಿರ್ದೇಶನದಲ್ಲೇ ಏನಾದರೂ ವಿಶೇಷತೆ ಇರಬೇಕೆಂಬ ಹಂಬಲದಿಂದ, ಈ ಚಿತ್ರವನ್ನು ಸಿಂಗಲ್ ಟೇಕ್ ನಲ್ಲಿ ಮಾಡಿ ಮುಗಿಸಿದ್ದಾರಂತೆ ನಿರ್ದೇಶಕ ಮುತ್ತುರಾಜ್.
ಈ ಹಿಂದೆ ಶಂಕರ್ ನಾಗ್, ಎಸ್. ನಾರಾಯಣ್ ಮುಂತಾದವರು ಈ ಪ್ರಯತ್ನ ಮಾಡಿದ್ದಾರೆ. ಆ ಸಿನಿಮಾಗಳ ಸ್ಪೂರ್ತಿಯಿಂದ ನಾನು ಈ ಪ್ರಯತ್ನವನ್ನು ಮಾಡಿದ್ದೇನೆ. ಸುಮಾರು ಮೂರು ತಿಂಗಳು ಪೂರ್ವ ತಯಾರಿ ಮಾಡಿಕೊಂಡಿದ್ದೇನೆ. ನಮ್ಮ ಸಿನಿಮಾದಲ್ಲಿ ಬಹುತೇಕ ಹೊಸ ಕಲಾವಿದರೆ ನಟಿಸಿರುವ ಕಾರಣ ಅವರಿಗೆಲ್ಲಾ ತರಬೇತಿ ನೀಡಿ ಆನಂತರ ಚಿತ್ರೀಕರಣ ಮಾಡಿದ್ದೇವೆ ಎಂಬುದು ಚಿತ್ರತಂಡದ ಮಾತು. ಕನಕಪುರದ ಬಳಿಯ ಮನೆಯೊಂದರಲ್ಲಿ ವಿಶೇಷ ಕ್ಯಾಮೆರಾಗಳನ್ನು ಬಳಸಿ ‘ಯಂಗ್ ಮ್ಯಾನ್’ ಎಂಬ ಈ ಸಿನಿಮಾದ ಚಿತ್ರೀಕರಣ ಮಾಡಲಾಗಿದೆ. ಸದ್ಯ ಈ ಸಿನಿಮಾವನ್ನು ಲಿಮ್ಕಾ ದಾಖಲೆಗೆ ಕಳುಹಿಸಲು ಚಿತ್ರತಂಡ ಮುಂದಾಗಿದೆ.





