ಔಟ್ ಆ್ಯಂಡ್ ಔಟ್ ಕಾಮಿಡಿ ಕಥಾಹಂದರದ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ. ಈಗಾಗಲೇ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸೆನ್ಸಾರ್ ನಿಂದಲೂ ಬಿಡುಗಡೆಗೆ ಗ್ರೀನ್ ಸಿಗ್ನಲ್ ಪಡೆದುಕೊಂಡಿದೆ. ಇತ್ತೀಚೆಗೆ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದ ಮೊದಲ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದೆ.

ನಟ ನವೀನ್ ಶಂಕರ್, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನ್, ಶಶಿಧರ್ ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಿದ್ದು, ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದಲ್ಲಿ ಬರುವ ‘ಅಯ್ಯೊಯ್ಯೋ ರಾಮಾ… ಕಣ್ಮುಂದೆನೇ ಡ್ರಾಮಾ… ನೋಡಾಕಾಯ್ತಿಲ್ಲ… ನಂಗೆ ನೋಡಾಕಾಯ್ತಿಲ್ಲ…’ ಎಂಬ ಮೊದಲ ಹಾಡನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಿನಿಮಾದ ಹೆಸರೇ ಹೇಳುವಂತೆ, ಇದೊಂದು ಲವ್ ಕಂ ಕಾಮಿಡಿ ಸಿನಿಮಾ. ಹಳ್ಳಿಯಲ್ಲಿರುವ ಅರಸಯ್ಯ ಎಂಬ ವ್ಯಕ್ತಿಯ ಪ್ರೇಮಕಥೆಯ ಸುತ್ತ ಸಿನಿಮಾ ಸಾಗುತ್ತದೆ. ಎಂಬುದು ಕಥಾಹಂದರದ ಬಗ್ಗೆ ಚಿತ್ರತಂಡ ನೀಡುವ ವಿವರಣೆ. ‘ಅಭಿನಯ ತರಂಗ’ದಲ್ಲಿ ನಟನೆ ಮತ್ತು ನಿರ್ದೇಶನ ತರಬೇತಿ ಪಡೆದಿರುವ, ಕೆಲ ಸಿನಿಮಾಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿರುವ ಜೆ. ವಿ. ಆರ್ ದೀಪು ಈ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್-ಕಟ್ ಹೇಳಿದ್ದಾರೆ.

‘ರಾಜ್ ಕಮಲ ಪಿಕ್ಚರ್ಸ್’ ಬ್ಯಾನರಿನಲ್ಲಿ ಶ್ರೀಮತಿ ಮೇಘಶ್ರೀ ರಾಜೇಶ್ ನಿರ್ಮಿಸಿರುವ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದ ಹಾಡುಗಳಿಗೆ ಪ್ರವೀಣ್-ಪ್ರದೀಪ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ಸುನೀಲ್ ಕಶ್ಯಪ್ ಸಂಕಲನವಿದೆ. ಹಾಸನ, ಗೊರೂರು ಸುತ್ತಮುತ್ತ ‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಮಹಾಂತೇಶ್ ಹೀರೇಮಠ್, ರಶ್ಮಿತಾ ಗೌಡ, ಪಿ. ಡಿ. ಸತೀಶ್, ವಿಜಯ್ ಚೆಂಡೂರ್, ರಘು ರಾಮನಕೊಪ್ಪ ಮೊದಲಾದವರು ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ ನವೆಂಬರ್ ವೇಳೆಗೆ ‘ಅರಸಯ್ಯನ ಪ್ರೇಮಪ್ರಸಂಗ’ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.





