ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರಾದ ಅಜನೀಶ್ ಲೋಕನಾಥ್ ಹಾಗೂ ಸಿ. ಆರ್ ಬಾಬಿ ಈಗ ನಿರ್ಮಾಪಕರಾಗಿದ್ದಾರೆ. ‘ಅಬ್ಬಾಸ್ ಸ್ಟುಡಿಯೋಸ್’ ಎಂಬ ಹೆಸರಿನಲ್ಲಿ ತಮ್ಮದೇ ನಿರ್ಮಾಣ ಸಂಸ್ಥೆಯನ್ನು ಈ ಇಬ್ಬರು ಜಂಟಿಯಾಗಿ ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯ ಮೊದಲ ಚಿತ್ರವಾಗಿ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿರುವ ‘ಜಸ್ಟ್ ಮ್ಯಾರೀಡ್’ ಎಂಬ ಚಿತ್ರ ನಿರ್ಮಾಣವಾಗುತ್ತಿದೆ.

ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸಂಗೀತ ನಿರ್ದೇಶಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ. ಆರ್. ಬಾಬಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೊಬ್ಬ ನಿರ್ದೇಶಕಿ ಸೇರ್ಪಡೆಯಾಗಿದ್ದಾರೆ.ಗಣಪತಿ ಹಬ್ಬದ ಶುಭ ಸಂದರ್ಭದಲ್ಲಿ ‘ಜಸ್ಟ್ ಮ್ಯಾರಿಡ್’ ಚಿತ್ರದ ‘ಗಂ ಗಣೇಶಾಯ ನಮಃ’ ಎಂಬ ಹಾಡು ‘ಆನಂದ್ ಆಡಿಯೋ’ ಮೂಲಕ ಬಿಡುಗಡೆಯಾಗಿದೆ. ಶಶಿ ಕಾವೂರ್ ಬರೆದಿರುವ ಈ ಹಾಡಿಗೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ವರುಣ್ ರಾಮಚಂದ್ರ, ಮಧ್ವೇಶ್ ಭಾರದ್ವಾಜ್, ಅಭಿಷೇಕ್ ಹಾಗೂ ವಿಶಾಖ್ ಹಾಡಿದ್ದಾರೆ. ಗಣಪತಿ ಕುರಿತಾದ ಈ ಹಾಡಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಿನಿಮಾದ ಹೆಸರೆ ಹೇಳುವಂತೆ ‘ಜಸ್ಟ್ ಮ್ಯಾರಿಡ್’ ಒಂದು ಪ್ರೇಮಕಥೆಯ ಸಿನಿಮಾ. ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ನಾಯಕ – ನಾಯಕಿಯಾಗಿ ನಟಿಸುತ್ತಿದ್ದು, ಶೃತಿ ಹರಿಹರನ್, ಅಚ್ಯುತಕುಮಾರ್, ಸಾಕ್ಷಿ ಅಗರವಾಲ್, ರವಿಶಂಕರ್ ಗೌಡ, ವಾಣಿ ಹರಿಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಕ್ಲಾಸ್ ಹಾಗೂ ಮಾಸ್ ಎರಡು ಥರದ ಆಡಿಯನ್ಸ್ ಗೂ ಇಷ್ಟವಾಗುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ ಚಿತ್ರೀಕರಣ ಈ ತಿಂಗಳ ಕೊನೆಗೆ ಬೆಂಗಳೂರಿನಲ್ಲಿ ಆರಂಭವಾಗಲಿದೆ ಎಂದು ತಿಳಿಸಿದೆ ಚಿತ್ರತಂಡ.





