ನಟ ವಿಜಯ್ ರಾಘವೇಂದ್ರ ಹಾಗೂ ಸೋನು ಗೌಡ ಜೋಡಿಯಾಗಿ ಅಭಿನಯಿಸಿರುವ ‘ಮರೀಚಿ’ ಸಿನಿಮಾ ತೆರೆಗೆ ಬರಲು ತಯಾರಾಗುತ್ತಿದೆ. ಸದ್ಯ ‘ಮರೀಚಿ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿರುವ ಚಿತ್ರತಂಡ, ಇತ್ತೀಚೆಗೆ ಸಿನಿಮಾದ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಸಸ್ಪೆನ್ಸ್-ಥ್ರಿಲ್ಲಿಂಗ್ ಕಥಾಹಂದರ ‘ಮರೀಚಿ’ ಸಿನಿಮಾದಲ್ಲಿ ನಾಯಕ ನಟ ವಿಜಯ ರಾಘವೇಂದ್ರ ಅಂಶಗಳ ಖಾಕಿ ತೊಟ್ಟು ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸೋನುಗೌಡ ‘ಮರೀಚಿ’ ಸಿನಿಮಾದಲ್ಲಿ ನಾಯಕ ವಿಜಯ ರಾಘವೇಂದ್ರ ಅವರ ಪತ್ನಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಅಭಿ ದಾಸ್, ಸ್ಪಂದನಾ ಸೋಮಣ್ಣ, ಆರ್ಯನ್, ಶೃತಿ ಪಾಟೀಲ್, ಗೋಪಾಲ್ ಕೃಷ್ಣ ದೇಶಪಾಂಡೆ, ಅರುಣ ಬಾಲರಾಜ್ ಮೊದಲಾದವರು ಈ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿರುವ, ಒಂದಿಷ್ಟು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ಸಿದ್ಧ್ರುವ್ ‘ಮರೀಚಿ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮತ್ತು ನಿರ್ದೇಶನ ಮಾಡುತ್ತಿದ್ದಾರೆ.
‘ಮರೀಚಿ’ ಎಂಬ ಟೈಟಲ್ ಇಡುವ ಮೊದಲು 150ಕ್ಕೂ ಹೆಚ್ಚು ಟೈಟಲ್ ಹಳು ನಮ್ಮ ಮುಂದಿದ್ದವು. ಅದರಲ್ಲಿ ಋಷಿ ಹೆಸರು ಇಡುವ ಟೈಟಲ್ ಆಯ್ಕೆ ಮಾಡಬೇಕಿತ್ತು. ಅದಕ್ಕೆ ‘ಮರೀಚಿ’ ಎಂಬ ಟೈಟಲ್ ಆಯ್ಕೆ ಮಾಡಿದ್ದೇವೆ. ‘ಮರೀಚಿ’ ಎಂದರೆ ಬ್ರಹ್ಮನ ಮಗ. ದೇವರು ಹಾಗೂ ಅಸುರರು ಇಬ್ಬರಿಗೂ ಗಾಡ್ ಫಾದರ್. ಒಳ್ಳೆಯದು ಮತ್ತು ಕೆಟ್ಟದಕ್ಕೆ ‘ಮರೀಚಿ’ ಗಾಡ್ ಫಾದರ್. ನಮ್ಮ ಸಿನಿಮಾದಲ್ಲೂ ಅದೇ ಅಂಶಗಳಿರುವುದರಿಂದ, ಅದನ್ನೇ ಟೈಟಲ್ ಆಗಿ ತೆಗೆದುಕೊಂಡಿದ್ದೇವೆ ಎಂಬುದು ಟೈಟಲ್ ಬಗ್ಗೆ ಚಿತ್ರತಂಡ ನೀಡಿರುವ ವಿವರಣೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಚಿತ್ರತಂಡ ಶೀಘ್ರದಲ್ಲೇ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ.





