ಹುಚ್ಚ ಸಿನಿಮಾದಲ್ಲಿ ಕಿಚ್ಚನಿಗೆ ಜೋಡಿಯಾಗಿ ಕರುನಾಡ ತುಂಬೆಲ್ಲಾ ಮನೆಮಾತಾದ ನಟಿ ರೇಖಾ ವೇದವ್ಯಾಸ್ ಬದಲಾದ ಲುಕ್ನಲ್ಲಿ ಕಾಣಿಸಿಕೊಂಡು ಎಲ್ಲರನ್ನೂ ಬೆಚ್ಚಿಬೀಳಿಸಿದ್ದರು. ದೇಹದ ತೂಕ ಕಳೆದುಕೊಂಡು ಏಕಾಏಕಿ ದರ್ಶನ ಕೊಟ್ಟ ಜಿಂಕೆಮರಿ ಚೆಲುವೆನಾ ನೋಡಿ ಎಲ್ಲರೂ ದಂಗಾಗಿದ್ದರು. ಏನಾಯ್ತು ನಟಿ ರೇಖಾಗೆ ? ಯಾಕ್ಹಿಂಗ್ ಆಗಿದ್ದಾರೆ? ಕೈಯಲ್ಲಿ ಅವಕಾಶಗಳಿಲ್ಲ ಅಂತ ಕೊರಗಿದ್ರಾ? ಸಿನಿಮಾದಲ್ಲಿ ಚಾನ್ಸ್ ಗಿಟ್ಟಿಸಿಕೊಳ್ಳಲಿಕ್ಕೇನಾದ್ರೂ ಸಣ್ಣ ಆದ್ರಾ? ಹೌದು ಸ್ಲಿಮ್ ಆಗ್ಬೇಕು ನಿಜ ಆದರೆ ಇಷ್ಟೊಂದು ಸಣ್ಣ ಆಗೋದು ಸರೀನಾ? ಫಿಟ್ನೆಸ್ ಕಾಪಾಡಿಕೊಳ್ಳಲಿಕ್ಕೆ ಹೋಗಿ ಏನಾದರೂ ಎಡವಟ್ಟು ಮಾಡಿಕೊಂಡರಾ? ಜಿಮ್ಮು, ಡಯಟ್, ವರ್ಕೌಟ್ ಮೊರೆ ಹೋಗಿದ್ರಿಂದ ಸೈಡ್ ಎಫೆಕ್ಟ್ ಏನಾದ್ರೂ ಆಯ್ತಾ? ಅಥವಾ ಅವರ ಆರೋಗ್ಯ ಏನಾದರೂ ಹದಗೆಟ್ಟಿದ್ದಿಯಾ? ಗಂಭೀರ ಸಮಸ್ಯೆ ಏನಾದರೂ ಆ ನಟಿಯನ್ನ ಕಾಡ್ತಿದೆಯಾ? ಹೀಗೆ ನೂರೆಂಟು ಪ್ರಶ್ನೆಗಳು ಕಳೆದ ಹದಿನೈದು ದಿನಗಳಿಂದ ಕಾಡಿದ್ದಂತೂ ಸತ್ಯ. ಅವರ ಅಭಿಮಾನಿಗಳನ್ನ ಆತಂಕ್ಕೀಡುಮಾಡಿದ್ದೂ ಕೂಡ ಖರ್ರೆ. ಆದ್ರೀಗ, ಸ್ವತಃ ರೇಖಾ ಅವರೇ ಮಾತನಾಡಿದ್ದಾರೆ. ಆಪ್ತರು, ಅಭಿಮಾನಿಗಳು ಕೊ0ಚ ನೀರಾಳವಾಗುವಂತೆ ಮಾಡಿದ್ದಾರೆ.

ನಟಿ ರೇಖಾ ಮೂಲತಃ ಬೆಂಗಳೂರಿನ ಹುಡುಗಿ. ಮಾಡೆಲಿಂಗ್ ಕ್ಷೇತ್ರದಿಂದ ಬಣ್ಣದ ಜಗತ್ತಿಗೆ ಕಾಲಿಟ್ಟ ಬೆಡಗಿ. ಒಂದು ಕಾಲಕ್ಕೆ ಸ್ಟಾರ್ ನಾಯಕಿ. ಅಭಿನಯ ಚಕ್ರವರ್ತಿ ಜೊತೆ ಸಿನಿಮಾ ಜರ್ನಿ ಶುರು ಮಾಡಿದ ಈಕೆ ಮುಂದೆ ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ಮಿಂಚಿದರು. ಎಲ್ಲಾ ಇಂಡಸ್ಟ್ರಿಯಲ್ಲೂ ಸೈ ಎನಿಸಿಕೊಂಡು ಸ್ಟಾರ್ ಡಂ ಕ್ರಿಯೇಟ್ ಮಾಡ್ಕೊಂಡರು. ಆದರೆ, ಅದೇ ಸ್ಟಾರ್ ಗಿರಿ ಇವತ್ತಿಗಿಲ್ಲ. ಕಾಲಚಕ್ರ ಉರುಳಿದಂತೆ ಹಳೆ ನೀರು ಹರಿದು ಹೊಸ ನೀರು ಬಂದಂತೆ ಈಗ ಬಣ್ಣದ ಲೋಕದಲ್ಲಿ ಹೊಸಬರ ಹವಾ ಶುರುವಾಗಿದೆ. ಹೀಗಾಗಿ, ಮಾಯಲೋಕದಲ್ಲಿ ನಂ1 ನಾಯಕಿಯಾಗಿ ಮೆರೆದ ಎಷ್ಟೋ ನಟಿಮಣಿಯರು ತೆರೆಮರೆಯಲ್ಲಿ ಕಳೆದೋಗಿದ್ದಾರೆ. ಆ ಸಾಲಿಗೆ ನಟಿ ರೇಖಾ ವೇದವ್ಯಾಸ್ ಕೂಡ ಸೇರಿಕೊಳ್ತಾರೆ. ಯಾಕಂದರೆ, ನಟಿ ರೇಖಾ ಬೆಳ್ಳಿತೆರೆಯಿಂದ ದೂರ ಉಳಿದು ಭರ್ತಿ ಒಂಭತ್ತು ವರ್ಷಗಳು ಉರುಳಿವೆ. 2014ರಲ್ಲಿ ಕನ್ನಡದಲ್ಲಿ ತುಳಸಿ ಸಿನಿಮಾವೇ ಕೊನೆ ಅಲ್ಲಿಂದ ಈಚೀಗೆ ರೇಖಾ ಬಣ್ಣ ಹಚ್ಚಿಲ್ಲ, ಬಣ್ಣದ ಲೋಕದಲ್ಲಿ ಕಾಣಿಸಿಕೊಳ್ಳುತ್ತಿಲ್ಲ.

ಹೀಗೆ, ಸಿನಿಮಾ ಕ್ಷೇತ್ರದಿಂದ ಅಂತರ ಕಾಯ್ದುಕೊಂಡ ನಟಿ ರೇಖಾ ಆಗಾಗ ತೆಲುಗು, ತಮಿಳು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ತಿದ್ದರು ಮತ್ತು ಕೆಲವು ಮೀಡಿಯಾಗಳಿಗೆ ಸಂದರ್ಶನ ನೀಡುತ್ತಿದ್ದರು. ಇತ್ತೀಚೆಗೆ ಅದನ್ನು ಕೂಡ ನಿಲ್ಲಿಸಿದ್ದರು. ಆದರೆ, ಮೊನ್ನೆ ಗೌರಿ-ಗಣೇಶ ಹಬ್ಬದಂದು `ಶ್ರೀದೇವಿ ಡ್ರಾಮಾ ಕಂಪನಿ’ಗೆ ಸ್ಪೆಷಲ್ ಗೆಸ್ಟ್ ಆಗಿ ಎಂಟ್ರಿಕೊಟ್ಟರು. ಅಲ್ಲಿ ಅವ್ರನ್ನ ನೋಡಿದವರೆಲ್ಲಾ ಶಾಕ್ಗೊಳಗಾದರು, ಸಪೌಷ್ಟಿಕ ಸುಂದರಿ ರೇಖಾರ ಸವಕಲು ದೇಹ ನೋಡಿ ತಣ್ಣಗೆ ಬೆವತುಬಿಟ್ಟರು. ಅದೇ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂತಿದ್ದ ಇಂದ್ರಜಾ ರೇಖಾರನ್ನು ನೋಡಲಿಕ್ಕೆ ಆಗದೇ ಏನಾಯ್ತು? ಯಾಕ್ಹಿಂಗ್ ಆಗಿದ್ದೀರಾ ಹೇಳಿ ಅಂತ ಕೇಳೇಬಿಟ್ಟರು. ಆಗ ರೇಖಾ ಏನಂದರು ಗೊತ್ತೆ?

ಇತ್ತೀಚೆಗೆ ನನಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡವು. ಈಗಲೂ ಇವೆ. ಇದು ಆಕಸ್ಮಿಕವಾಗಿ ಸಂಭವಿಸಿದೆ. ಇದು ಸಣ್ಣ ತಲೆನೋವು ಅಥವಾ ದೊಡ್ಡ ಆರೋಗ್ಯ ಸಮಸ್ಯೆಯಾಗಿರಬಹುದು ಆದರೆ ಒತ್ತಡಕ್ಕೆ ಒಳಗಾಗಬೇಡಿ. ನೀವು ಒತ್ತಡದಲ್ಲಿದ್ದರೆ, ಆ ಆರೋಗ್ಯ ಸಮಸ್ಯೆಗಳು ಇನ್ನಷ್ಟು ದೊಡ್ಡದಾಗುತ್ತವೆ. ದೇವರಲ್ಲಿ ನಂಬಿಕೆಯಿಡಬೇಕು. ಕೆಲವೊಮ್ಮೆ ವೈದ್ಯರು ನೀಡುವ ಔಷಧಿಗಳು ಕೆಲಸ ಮಾಡದಿದ್ದರೂ ನಮ್ಮ ನಂಬಿಕೆ ನಮ್ಮನ್ನು ರಕ್ಷಿಸುತ್ತದೆ ಎಂದು ಅವರು ಹೇಳಿದ್ದಾರೆ.
ಅಷ್ಟಕ್ಕೂ? ಏನಾಯ್ತು ಅನ್ನೋದನ್ನ ಹೇಳಿಕೊಳ್ಳಲಿಕ್ಕೆ ಇಚ್ಚಿಸದ ನಟಿ ರೇಖಾ, ಅನಾರೋಗ್ಯ ಕಾಡಿದ್ದು ದೇವರ ದಯದಿಂದ ಮತ್ತು ಆತ್ಮವಿಶ್ವಾದಿಂದ ಚೇತರಿಸಿಕೊಂಡಿದ್ದು ಸತ್ಯ ಅನ್ನೋದನ್ನ ಒಪ್ಪಿಕೊಂಡಿದ್ದಾರೆ. ದೇವರು ಮೇಲೆ ನಂಬಿಕೆಯಿಡಿ ಎಂತಲೂ ಎಲ್ಲರಿಗೂ ತಿಳಿಸಿದ್ದಾರೆ. ಸಣ್ಣಗಾಗಿದ್ದು ಜಿಮ್ ಮಾಡಿನಾ ಅಥವಾ ಅನಾರೋಗ್ಯದಿಂದಲೇ ಸಣ್ಣಗಾಗಿದ್ದಾ ಇದ್ಯಾವುದನ್ನು ಬಾಯ್ಬಿಟ್ಟು ಹೇಳಿಲ್ಲ. ಯಾರನ್ನೂ ದೂಷಣೆ ಕೂಡ ಮಾಡಿಲ್ಲ. ಆಗಿದ್ದಾಯ್ತು ಅಂತ ಒಬ್ಬರೇ ನೋವು ಅನುಭವಿಸಿ, `ನಂಬಿಕೆ’ ಅನ್ನೋ ಮೂರಕ್ಷರವನ್ನೇ ನಂಬಿರುವ ಗೋವಿಂದಾಯ ನಮಃ ಚಿತ್ರನಟಿನಾ ಆ ಭಗವಂತ ಕೈಹಿಡಿಯಲಿ. ಆದಷ್ಟು ಬೇಗ ಆರೋಗ್ಯದಲ್ಲಿ ಚೇತರಿಕೆ ಕಾಣಲಿ. ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಬೇಕು ಅಂತ ಕನಸು ಕಂಡಿರುವ ಮೊನಲಿಸಾ ಮಹಾ ಕನಸು ಈಡೇರಲಿ. ಬ್ಲಾಕ್ಬಸ್ಟರ್ ಸಿನಿಮಾಗಳ ನಾಯಕಿಯಾಗಿ ಮಿಂಚಿದ ಕನ್ನಡತಿ ರೇಖಾ ವೇದವ್ಯಾಸ್ ಮತ್ತೆ ಹಳೆಯ ಫಾರ್ಮ್ಗೆ ಬರಲಿ, ಸಿನಿಮಾ ಮಾಡಲಿ ಅನ್ನೋದೇ ನಮ್ಮ ಆಶಯ ಕೂಡ.





