ಬಾಲಿವುಡ್ ಕಿಂಗ್ ಖಾನ್ ಶಾರುಖ್ ತಾವು ಬಾಕ್ಸ್ ಆಫೀಸ್ ಬಾದ್ಷಾ ಅನ್ನೋದನ್ನ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. `ಜವಾನ್’ ಸಿನಿಮಾ ಮೂಲಕ ಅಖಾಡಕ್ಕಿಳಿದಿರುವ ಬಾಲಿವುಡ್ ಬಾದ್ಷಾ ಬೆಳ್ಳಿತೆರೆನಾ ರೂಲ್ ಮಾಡುತ್ತಿದ್ದಾರೆ. ದ್ವಿಪಾತ್ರದಲ್ಲಿ ಬಿಗ್ಸ್ಕ್ರೀನ್ ಮೇಲೆ ಧಗಧಗಿಸ್ತಿರೋ ಕಿಂಗ್ ಖಾನ್ ಶಾರುಖ್, ಬಾಕ್ಸ್ ಆಫೀಸ್ನಲ್ಲಿ ಕೋಟಿ ಕೋಟಿ ಲೂಟಿ ಮಾಡ್ತಿದ್ದಾರೆ. ಕಣಕ್ಕಿಳಿದ ನಾಲ್ಕೇ ದಿನದಲ್ಲಿ 250 ಕೋಟಿ ಕೊಳ್ಳೆಹೊಡೆದು, ಸೌತ್-ನಾರ್ತ್ ಸಿನಿಮಾಗಳ ರೆಕಾರ್ಡ್ನ ಬ್ರೇಕ್ ಮಾಡಿದ್ದ ಜವಾನ್, ಹದಿನೆಂಟು ದಿನದಲ್ಲಿ ಸಾವಿರ ಕೋಟಿ ಮೂಟೆಕಟ್ಟಿ ಮೈ ನೇಮ್ ಈಸ್ ಖಾನ್ ಅಂತ ಮೀಸೆ ತಿರುವುತ್ತಿದ್ದಾರೆ.
ಯಸ್, ಬೆಳ್ಳಿತೆರೆ ಮೇಲೆ `ಜವಾನ್’ ಅಬ್ಬರ ಆರ್ಭಟ ಜೋರಾಗಿದೆ. ಇಂಡಿಯನ್ ಬಾಕ್ಸ್ ಆಫೀಸ್ನಲ್ಲಿ `ಜವಾನ್’ ನಾಗಾಲೋಟ ಮುಂದುವರೆದಿದ್ದು, ಕಿಂಗ್ ಖಾನ್ ಶಾರುಖ್ ಬಾಕ್ಸ್ ಆಫೀಸ್ ಕಿಂಗ್ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ. ಪಠಾಣ್ ಮೂಲಕ ಸ್ಟ್ರಾಂಗ್ ಕಂಬ್ಯಾಕ್ ಮಾಡಿದ್ದ ಬಾಲಿವುಡ್ ಬಾದ್ಷಾ, `ಜವಾನ್’ ಸಿನಿಮಾದಿಂದ ಎರಡನೇ ಭಾರಿಗೆ ದಿಗ್ವಿಜಯ ಸಾಧಿಸಿದ್ದಾರೆ. ಹದಿನೆಂಟು ದಿನದಲ್ಲಿ ವಿಶ್ವದಾದ್ಯಂತ ಸಾವಿರ ಕೋಟಿ ಗಳಿಕೆ ಮಾಡುವ ಮೂಲಕ ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ನಯಾ ಚರಿತ್ರೆ ಸೃಷ್ಟಿಸಿದ್ದಾರೆ. ಮಾತ್ರವಲ್ಲ ಹಿಂದಿ ಬೆಲ್ಟ್ ನ ಕಬ್ಜ ಮಾಡಿಕೊಂಡಿದ್ದಾರೆ.
ಬಾಹುಬಲಿ ಸೇರಿದಂತೆ ಕೆಜಿಎಫ್, ಕಾಂತಾರ, ಪುಷ್ಪ, ಆರ್ ಆರ್ ಆರ್ ಚಿತ್ರಗಳು ಹಿಂದಿ ಬೆಲ್ಟ್ ನ ಕಬ್ಜ ಮಾಡಿಕೊಂಡು ಕೇಕೆ ಹಾಕಿದ್ದ ಸುದ್ದಿ ನಿಮಗೆಲ್ಲ ಗೊತ್ತೆಯಿದೆ. ಸೌತ್ ಸಿನಿಮಾಗಳ ಅಬ್ಬರ-ಆರ್ಭಟಕ್ಕೆ ಬಾಲಿವುಡ್ ಚಿತ್ರಗಳು ಮಕಾಡೆ ಮಲಗಿದ್ದರಿಂದ ಹಿಂದಿ ಬೆಲ್ಟ್ ಸೌತ್ ಸಿನಿಮಾಗಳ ವಶವಾಗಿತ್ತು. ಆದ್ರೀಗ, ಬಿಟೌನ್ ಕಿಂಗ್ ಖಾನ್ ಹಿಂದಿ ಬೆಲ್ಟ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡುವ ಮೂಲಕ ಸೌತ್ ಸಿನಿಮಾಗಳ ರೆಕಾರ್ಡ್ನೆಲ್ಲಾ ಪೀಸ್ ಪೀಸ್ ಮಾಡುತ್ತಿದ್ದಾರೆ. ಕೆಜಿಎಫ್, ಪುಷ್ಪ, ಆರ್ ಆರ್ ಆರ್, ಬಾಹುಬಲಿ ಸೇರಿದಂತೆ ಎಲ್ಲಾ ಸಿನಿಮಾಗಳ ದಾಖಲೆಯನ್ನ ಕುಟ್ಟಿ ಪುಡಿಮಾಡಿ ಹಿಂದಿ ಬೆಲ್ಟ್ ನ ತಮ್ಮದಾಗಿಸಿಕೊಂಡಿದ್ದಾರೆ. ಅಂದ್ಹಾಗೇ, `ಜವಾನ್’ ಸಿನಿಮಾ ಹಿಂದಿ ಬೆಲ್ಟ್ ನಲ್ಲಿ 550 ಕೋಟಿ ಕಲೆಕ್ಷನ್ ಮಾಡಿದೆ.

500 ಕೋಟಿ ಕಲೆಕ್ಷನ್ ಮಾಡೋದಕ್ಕೆ ಬಾಹುಬಲಿ ಸಿನಿಮಾ 34 ದಿನ ಟೈಮ್ ತೆಗೆದುಕೊಂಡಿತ್ತು. ಪಠಾಣ್ ಚಿತ್ರ 28 ದಿನದಲ್ಲಿ 500 ಕೋಟಿ ಲೂಟಿ ಮಾಡಿತ್ತು. ಅನಂತರ ಬಂದ ಗದರ್ ಚಿತ್ರ 24 ದಿನದಲ್ಲಿ 500 ಕೋಟಿ ಉಡೀಸ್ ಮಾಡಿತ್ತು. ಆದರೆ ಬಾದ್ ಷಾ 18 ದಿನದಲ್ಲಿ 550 ಕೋಟಿ ಗುಡ್ಡೆಹಾಕಿ ಗಹಗಹಿಸುತ್ತಿದ್ದಾರೆ. ಬಾಹುಬಲಿ-2 ಚಿತ್ರದ ಓವರ್ ಆಲ್ ಕಲೆಕ್ಷನ್ ಮೇಲೆ ಕಣ್ಣಿಟ್ಟಿದ್ದಾರೆ. ಅಂದ್ಹಾಗೇ, ಬಾಹುಬಲಿ-2 ಸಿನಿಮಾ ವಲ್ರ್ಡ್ ವೈಡ್ 1810 ಕೋಟಿ ಕಲೆಕ್ಷನ್ ಮಾಡಿತ್ತು. ಸದ್ಯ, ಜವಾನ್ ಹೋಗ್ತಿರೋ ಸ್ಪೀಡ್ ನೋಡಿದರೆ ಬಾಹುಬಲಿ-2 ಲೈಫ್ ಟೈಮ್ ಕಲೆಕ್ಷನ್ ಹಿಂದಿಕ್ಕಿದರೂ ಅಚ್ಚರಿಯಿಲ್ಲ ಅಂತಾರೇ ಸಿನಿಪಂಡಿತರು

ಈ ಬ್ಲಾಕ್ಬಸ್ಟರ್ ಸಕ್ಸಸ್ಗೆ `ಜವಾನ್’ ಸಾರಥಿ ಮೊದಲ ಕಾರಣ ಅಂದರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಹೌದು, ಬಾದ್ಷಾನ ಭಿನ್ನ-ವಿಭಿನ್ನ ಅವತಾರದಲ್ಲಿ ತೋರಿಸಿ, ಭರ್ಜರಿ ಆ್ಯಕ್ಷನ್ ಇಟ್ಟು, ಮಾಸ್ ಮಸಾಲಾ ಸಿನಿಮಾ ಕಟ್ಟಿಕೊಟ್ಟಿರೋ ಆಟ್ಲಿ ಅಲಿಯಾಸ್ ಅರುಣ್ ಕುಮಾರ್, ಶಾರುಖ್ ಬಾಕ್ಸ್ ಆಫೀಸ್ ಕಿಂಗ್ ಅನ್ನೋದನ್ನ ಮತ್ತೆ ಪ್ರೂ ಮಾಡಿಸಿದ್ದಾರೆ. ರೆಡ್ ಚಿಲ್ಲಿಸ್ ಬ್ಯಾನರ್ ಗೆ ಭರ್ ಪೂರ್ ಹಣ ಹೊಳೆಯಾಗಿ ಹರಿದುಬರುವಂತೆ ನೋಡಿಕೊಂಡಿದ್ದಾರೆ. ದಿಲ್ವಾಲೇ, ಫ್ಯಾನ್, ಡಿಯರ್ ಜಿಂದಗಿ, ರಯೀಸ್, ಜೀರೋ ಹೀಗೆ ಸಾಲು ಸಾಲು ಸಿನಿಮಾಗಳು ಕೈ ಕೊಟ್ಟಿದ್ದರಿಂದ ಶಾರುಖ್ ಸೋಲಿನ ಸುಳಿಗೆ ಸಿಲುಕಿದ್ದರು. ಸಕ್ಸಸ್ ಕಾಣದೇ, ಯಶಸ್ಸು ಸಿಗದೇ ಕಂಗ್ ಕಂಗಾಲಾಗಿದ್ದರು. ನಾಲ್ಕು ವರ್ಷಗಳ ಬ್ರೇಕ್ನ ನಂತರ ಮೈ ಕೊಡವಿಕೊಂಡು ಅಖಾಡಕ್ಕಿಳಿದ ಕಿಂಗ್ ಖಾನ್, ಪಠಾಣ್ ಮೂಲಕ 1000 ಕೋಟಿ ಮೂಟೆ ಕಟ್ಟಿದ್ದರು. ಇದೀಗ `ಜವಾನ್’ ಸಿನಿಮಾ ಮೂಲಕ ಮತ್ತೊಮ್ಮೆ 1000 ಕೋಟಿ ಮೂಟೆಕಟ್ಟಿ ತಮ್ಮ ಕ್ಯಾಲಿಬರ್ ಏನು ಅನ್ನೋದನ್ನ ಪ್ರೂ ಮಾಡಿದ್ದಾರೆ. ಪಠಾಣ್ ನಂತರ ಮಗದೊಂದು ಸಕ್ಸಸ್ ನೋಡಿರೋ ಶಾರುಖ್ ಖಾನ್ ಮತ್ತೆ ಹಳೆಯ ಫಾರ್ಮ್ಗೆ ಮರಳಿದ್ದಾರೆ. ಇದೇ ವರ್ಷ ಡಿಸೆಂಬರ್ ನಲ್ಲಿ ರಾಜ್ಕುಮಾರ್ ಹಿರಾನಿ ನಿರ್ದೇಶನದ `ಡಂಕಿ’ ಸಿನಿಮಾ ಮೂಲಕ ಮತ್ತೆ ಅಖಾಡಕ್ಕಿಳಿಯಲಿದ್ದಾರೆ.





