ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ’ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮ ಸ್ಪಂದನೆ ಪಡೆದಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆದ ಚಿತ್ರವು ತೆಲುಗಿನಲ್ಲೂ ‘ಸಪ್ತ ಸಾಗರಲೂ ದಾಟಿ’ ಎಂದು ತೆರೆಗೆ ಬಂದು, ಅಲ್ಲೂ ಉತ್ತಮ ರೆಸ್ಪಾನ್ಸ್ ಪಡೆದಿದೆ. ಇನ್ನು ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಎರಡನೇ ಭಾಗವು ಅಕ್ಟೊಬರ್ 20ರಂದು ತೆರೆ ಕಾಣಲಿದೆ ಎಂದು ಈ ಮೊದಲು ಚಿತ್ರತಂಡ ಘೋಷಿಸಿಕೊಂಡಿತ್ತು.

ಆದರೆ ಇದೀಗ ಹಲವು ಕಾರಣಗಳಿಂದ ಎರಡನೇ ಪಾರ್ಟ್ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಹೌದು, ಕಥೆಯ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡನೇ ಪಾರ್ಟ್ ಬಿಡುಗಡೆ ನಿಗದಿತ ದಿನಾಂಕಕ್ಕಿಂತ ಒಂದು ವಾರ ಮುಂದಕ್ಕೆ ಹೋಗಿದೆ. ಚಿತ್ರವು ಅಕ್ಟೋಬರ್ 27ರಂದು ತೆರೆಗೆ ಬರುತ್ತಿದೆ. ಸ್ವತಃ ನಿರ್ಮಾಪಕ ರಕ್ಷಿತ್ ಶೆಟ್ಟಿ ಅವರೇ ಇದನ್ನು ಖಚಿತಪಡಿಸಿದ್ದಾರೆ.

‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸೆಪ್ಟೆಂಬರ್ 1ರಂದು ತೆರೆಕಂಡಿತ್ತು. ಇದರ ತೆಲುಗು ವರ್ಷನ್ ಸೆಪ್ಟೆಂಬರ್ 22ರಂದು ತೆರೆಗೆ ಬಂದು ಉತ್ತಮ ಇಂಪಾಕ್ಟ್ ಬೀರಿದೆ. ಅಕ್ಟೊಬರ್ 20ರಂದು ಕನ್ನಡದ ಜೊತೆಗೆ ಬೇರೆ ಬೇರೆ ಭಾಷೆಯ ಹಲವು ಬಿಗ್ ಸ್ಟಾರ್ಸ್ ಸಿನಿಮಾಗಳು ಬಿಡುಗಡೆಯಾಗುತ್ತಿರುವುದರಿಂದ, ಒಂದೊಳ್ಳೆಯ ಸದಭಿರುಚಿ ಸಿನಿಮಾ ಪ್ರೇಕ್ಷಕರಿಂದ ಮಿಸ್ ಆಗಬಾರದು ಎಂಬ ಕಾರಣಕ್ಕೆ ಚಿತ್ರತಂಡ,’ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಎರಡನೇ ಪಾರ್ಟ್ ಬಿಡುಗಡೆಯನ್ನು ಮುಂದೂಡಿದೆ ಎನ್ನಲಾಗುತ್ತಿದೆ.





