ಬಾಲ್ಯದ ಸ್ನೇಹ, ಪ್ರೀತಿ ಹಾಗೂ ತ್ರಿಕೋನ ಪ್ರೇಮಕಥಾಹಂದರ ‘ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ನಟ ಪ್ರಮೋದ್ ಶೆಟ್ಟಿ ಹಾಗೂ ದೀಕ್ಷಿತ್ ಶೆಟ್ಟಿ ‘ಅಭಿರಾಮಚಂದ್ರ’ ಸಿನಿಮಾದ ಟ್ರೇಲರ್ ರಿಲೀಸ್ ಮಾಡಿ ಹೊಸಬರ ಪ್ರಯತ್ನಕ್ಕೆ ಶುಭ ಹಾರೈಸಿದರು.
ಈ ಹಿಂದೆ ‘ಕಿರಿಕ್ ಪಾರ್ಟಿ’ ಸಿನಿಮಾದಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದ ನಾಗೇಂದ್ರ ಗಾಣಿಗ ‘ಅಭಿರಾಮಚಂದ್ರ’ ಸಿನಿಮಾಕ್ಕೆ ಕಥೆ, ಚಿತ್ರಕಥೆ ಬರೆದು ಮೊದಲ ಬಾರಿಗೆ ಸ್ವತಂತ್ರ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. ನಾಗೇಂದ್ರ ಗಾಣಿಗ ನಿರ್ದೇಶನಲ್ಲಿ ಮೂಡಿಬಂದಿರುವ ‘ಅಭಿರಾಮಚಂದ್ರ’ ಸಿನಿಮಾದಲ್ಲಿ ಸಿದ್ದು ಮೂಲಿಮನಿ, ರಥ ಕಿರಣ್, ನಾಟ್ಯರಂಗ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.
ಶಿವಾನಿ ರೈ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ವೀಣಾ ಸುಂದರ್, ಸುಂದರ್, ಎಸ್. ನಾರಾಯಣ್, ಪ್ರಕಾಶ್ ತುಮ್ಮಿನಾಡು, ಪವನ್ ಮೊದಲಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಎ.ಜಿ.ಎಸ್ ಎಂಟರ್ಟೈನ್ಮೆಂಟ್’ ಹಾಗೂ ‘ರವಿ ಬಸ್ರೂರು ಮ್ಯೂಸಿಕ್ ಮತ್ತು ಮೂವೀಸ್’ ಬ್ಯಾನರ್ನಡಿ ಎ. ಜಿ. ಸುರೇಶ್ ಹಾಗೂ ಮಲ್ಲೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಟ್ರೇಲರ್ ಮೂಲಕ ಗಮನಸೆಳೆಯುತ್ತಿರುವ ‘ಅಭಿರಾಮಚಂದ್ರ’ ಸಿನಿಮಾ ಇದೇ ಅಕ್ಟೊಬರ್ 6ಕ್ಕೆ ಬಿಡುಗಡೆಯಾಗಲಿದೆ.





