ನಟ ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ ಹೊಸ ಸಿನಿಮಾ ‘ಶುಗರ್ ಫ್ಯಾಕ್ಟರಿ’ ಬಿಡುಗಡೆಗೆ ರೆಡಿಯಾಗುತ್ತಿದೆ. ಈಗಾಗಲೇ ತನ್ನ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಚಿತ್ರ ‘ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ.
ನಟ ಡಾರ್ಲಿಂಗ್ ಕೃಷ್ಣ ಅವರ ಸಿನಿ ಜರ್ನಿಯಲ್ಲೇ ‘ಶುಗರ್ ಫ್ಯಾಕ್ಟರಿ’ ಬಿಗ್ ಬಜೆಟ್ ನ ಸಿನಿಮಾವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ ಅವರಿಗೆ ಸೋನಾಲ್ ಮಾಂತೆರೊ, ಅದ್ವಿತಿ ಶೆಟ್ಟಿ, ರುಹಾನಿ ಶೆಟ್ಟಿ ಕೃಷ್ಣ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ರಂಗಾಯಣ ರಘು, ಸೂರಜ್ ಮೊದಲಾದವರು ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಇನ್ನು ಬಿಡುಗಡೆಯಾಗಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾದ ಟ್ರೇಲರ್ ಸೋಶಿಯಲ್ ಮೀಡಿಯಾದಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಟ್ರೇಲರ್ ನಲ್ಲಿ ಮನೋರಂಜನೆಯ ಮಹಾಪೂರವೇ ಹರಿದು ಬಂದಿದೆ. ಎರಡು ನಿಮಿಷಗಳ ಟ್ರೇಲರ್ ನಲ್ಲೇ ಸಾಕಷ್ಟು ಮನರಂಜನೆ ಹಾಗೂ ಹಾಸ್ಯಭರಿತ ಸಂಭಾಷಣೆಗಳಿದೆ. ಇಡೀ ಚಿತ್ರದುದ್ದಕ್ಕೂ ನಾನ್ ಸ್ಟಾಪ್ ಮನರಂಜನೆ ಖಚಿತ ಎಂಬುದನ್ನು ಟ್ರೇಲರ್ ನಲ್ಲಿ ಚಿತ್ರತಂಡ ಖಚಿತವಾಗಿ ಹೇಳಿದಂತಿದೆ.
ಗಿರೀಶ್ ನಿರ್ಮಿಸಿರುವ, ದೀಪಕ್ ಅರಸ್ ನಿರ್ದೇಶಿಸಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರದ ಹಾಡಗಳು ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು, ಈಗ ಟ್ರೇಲರ್ ಕೂಡ ಅದೇ ಹಾದಿಯಲ್ಲಿ ಸಾಗುತ್ತಿದೆ. ಅದ್ದೂರಿಯಾಗಿ ಮೂಡಿಬಂದಿರುವ ‘ಶುಗರ್ ಫ್ಯಾಕ್ಟರಿ’ ಸಿನಿಮಾವನ್ನು ಇದೇ ನವೆಂಬರ್ 24 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.